ನ್ಯಾಯಮೂರ್ತಿಗಳ ನಿಂದನೆ: ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ದಂಪತಿಗೆ ಖುದ್ದು ಹಾಜರಿಗೆ ಹೈಕೋರ್ಟ್ ಆದೇಶ..!
ನ್ಯಾಯಮೂರ್ತಿಗಳನ್ನು ನಿಂದನೆಗೈದ ಆರೋಪ
ಮಹೇಶ್ ಶೆಟ್ಟಿ ‌ದಂಪತಿಗೆ ಹೈಕೋರ್ಟ್ ನೋಟಿಸ್

ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾ ಅವರಿಗೆ ಜ. 5 ರಂದು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಬಬ್ಬುಕಟ್ಟೆ ಉಜಿರೆ ನಿವಾಸಿ ಜಯಪ್ರಕಾಶ ಶೆಟ್ಟಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾ. ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಆಡಿರುವ ನಿಂದನಾತ್ಮಕ ಮಾತುಗಳ ಮಾಹಿತಿಯನ್ನು ಪೆನ್‌ಡ್ರೈವ್‌ನಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. 

ಕೋರ್ಟ್‌ನ ಕಂಪ್ಯೂಟರ್ ಸೆಕ್ಷನ್‌ನಲ್ಲಿ ಮಹೇಶ್ ಶೆಟ್ಟಿ ಪರ ವಕೀಲರನ್ನು ಕರೆಯಿಸಿ ಅವರು ಆಡಿರುವ ಮಾತುಗಳನ್ನು ಕೇಳಿಸಲಾಯಿತು. ಆಗ ಆಡಿರುವ ಮಾತು ತಪ್ಪು ಎಂದು ತಿಮರೋಡಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು. ಹಾಗಾಗಿ, ಜನವರಿ 5 ರಂದು ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಪತ್ನಿ ಸರೋಜಾ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು. 

ಪ್ರಕರಣದ ಹಿನ್ನೆಲೆ : ಮಹೇಶ್ ಶೆಟ್ಟಿ ತಿಮರೋಡಿ ಜಮೀನು ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್ ಒತ್ತುವರಿ ತೆರವುಗೊಳಿಸಲು 2019 ರ ಜುಲೈ 18 ರಂದು ಆದೇಶಿಸಿತ್ತು. 

ಅದರಂತೆ ಉಜಿರೆ ಪಿಡಿಒ ಸ್ಥಳಕ್ಕೆ ಭೇಟಿ ಕೊಟ್ಟಾಗ ಹೈಕೋರ್ಟ್ ನ್ಯಾಯಮೂರ್ತಿಗಳ ಬಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ನಿಂದನಾತ್ಮಕವಾಗಿ ಮಾತನಾಡಿದ್ದರು. ನ್ಯಾಯಾಲಯದ ಆದೇಶ ಪಾಲಿಸದ ಹಾಗೂ ನ್ಯಾಯಮೂರ್ತಿಗಳ ಕುರಿತು ನಿಂದನೆ ಮಾಡಿದ ಆರೋಪದಲ್ಲಿ ತಿಮರೋಡಿ ವಿರುದ್ಧ ನ್ಯಾಯಾಂಗ ನಿಂದನೆ ದಾವೆ ಹೂಡಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!