ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ ಭಾರತದ "ಲೆಜೆಂಡ್ ಮೇರಿ ಕೋಮ್"
ಬಾಕ್ಸಿಂಗ್ ಇತಿಹಾಸದಲ್ಲಿ ಹಲವು ದಾಖಲೆ ದಿಟ್ಟ ಮಹಿಳೆ

6 ಬಾರಿ ಚಾಂಪಿಯನ್ ಪಟ್ಟ ಗೆದ್ದ ಮೇರಿಕೋಮ್ ಬಾಕ್ಸಿಂಗ್‌ಗೆ ವಿದಾಯ

ಬರೋಬ್ಬರಿ ಆರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಅವರು ಬಾಕ್ಸಿಂಗ್ ಕ್ಷೇತ್ರಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಮೇರಿ ಕೋಮ್ 41 ವರ್ಷ ವಯಸ್ಸಿನವರಾಗಿದ್ದ ಮೇರಿ ಕೋಮ್ ಅವರು ಬಾಕ್ಸಿಂಗ್ ಕ್ರೀಡೆಗೆ ನಿವೃತ್ತಿ ಘೋಷಿಸಿರುವುದು ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಮೇರಿ ಕೋಮ್ ಅವರು 6 ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ. 2012ರ ಒಲಿಂಪಿಕ್ಸ್‌ನಲ್ಲೂ ಪದಕ ಗೆದ್ದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮೇರಿ ಕೋಮ್ 41 ವರ್ಷ ವಯಸ್ಸಿನವರಾಗಿದ್ದು, ಹೀಗಾಗಿಯೇ ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಿರ್ದಿಷ್ಟ ಕ್ರೀಡೆಗಳಲ್ಲಿ ಹೋರಾಡಿ ಗೆಲ್ಲುವ ಹಸಿವು ನನ್ನಲ್ಲಿ ಈಗಲೂ ಇದೆ. ನಾನು ಹೆಚ್ಚು ಆಡಲು ಬಯಸುತ್ತೇನೆ. ಆದರೆ ನನ್ನ ವಯಸ್ಸಿನ ಕಾರಣ ನನಗೆ ಆಡಲು ಅವಕಾಶ ನೀಡುತ್ತಿಲ್ಲ. ಇದರಲ್ಲಿ ನಾನು ಅಸಹಾಯಕ. ಇದು ದುರದೃಷ್ಟಕರ. ಈ ಕಾರಣಕ್ಕಾಗಿ ನಾನು ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಅದೃಷ್ಟವಶಾತ್ ನಾನು ನನ್ನ ವೃತ್ತಿಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಮೇರಿಕೋಮ್ ಹೇಳಿದ್ದಾರೆ.

ಮೇರಿ ಕೋಮ್ ಬಾಕ್ಸಿಂಗ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 6 ಬಾರಿ ಚಾಂಪಿಯನ್ ಪಟ್ಟ ಗೆದ್ದ ವಿಶ್ವದ ಮೊದಲ ಮಹಿಳಾ ಬಾಕ್ಸರ್ ಮಾತ್ರವಲ್ಲದೇ, 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಮೇರಿ ಕೋಮ್ ಆಗಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2006 ರಲ್ಲಿ, ಮೇರಿ ಕೋಮ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು, 2009 ರಲ್ಲಿ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಸಹ ನೀಡಲಾಗಿತ್ತು.

ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳಿಗೆ 40 ವರ್ಷದವರೆಗೆ ಮಾತ್ರ ಸ್ಪರ್ಧೆಗಳಲ್ಲಿ ಹೋರಾಡಲು ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಅವಕಾಶ ನೀಡುತ್ತದೆ. ಆದರೆ ಮೇರಿ ಕೋಮ್ ಅವರಿಗೆ ಈಗಾಗಲೇ 40 ವರ್ಷ ಆಗಿರುವುದರಿಂದ ಸ್ವತಃ ತಾವೇ ಬಾಕ್ಸಿಂಗ್‌ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೇರಿ ಕೋಮ್ ನಿರಂತರವಾಗಿ ಏಳು ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ಗೆದ್ದ ಏಕೈಕ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆ ಇದೆ. 2018 ರಲ್ಲಿ, ಮಣಿಪುರ ಸರ್ಕಾರವು ಅವರ ಅಸಾಧಾರಣ ಪ್ರದರ್ಶನಕ್ಕಾಗಿ ಮೀಥೋಯ್ ಲಿಮಾ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಅವರು ಪದ್ಮಭೂಷಣ, ಪದ್ಮಶ್ರೀ, ಅರ್ಜುನ ಪ್ರಶಸ್ತಿ ಮತ್ತು ಇತರ ಅನೇಕ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟಿದ್ದಾರೆ. ಮೇರಿ ಕೋಮ್ ಅವರ ಜೀವನವನ್ನು ಆಧರಿಸಿದ ಹಿಂದಿ ಬಯೋಪಿಕ್ 2014 ರಲ್ಲಿ ಬಿಡುಗಡೆಯಾಗಿತ್ತು, ಇದರಲ್ಲಿ ಪ್ರಿಯಾಂಕಾ ಚೋಪ್ರಾ ಮೇರಿ ಕೋಮ್ ಪಾತ್ರವನ್ನು ನಿರ್ವಹಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!