ದೇಗುಲವಾಗಿದ್ದ ಜ್ಞಾನವಾಪಿಯಲ್ಲಿ ಕನ್ನಡ ಶಿಲಾ ಶಾಸನ, ವಿರೂಪಗೊಂಡ ಶಿವಲಿಂಗ, ಗಣೇಶ, ಹನುಮ ಮೂರ್ತಿಗಳು ಪತ್ತೆ.!
ದೇಗುಲ ಕೆಡವಿ ಮಸೀದಿ ನಿರ್ಮಾಣ - ಕನ್ನಡ ಲಿಪಿಗಳ ಶಾಸನಗಳು ಪತ್ತೆ - ಸರ್ವೇಕ್ಷಣಾ ಇಲಾಖೆಯಿಂದ ಸ್ಫೋಟಕ ವರದಿ

ಕಾಶಿಯ ಜ್ಞಾನವಾಪಿ ಮಸೀದಿಯಲ್ಲಿ ವೈಜ್ಞಾನಿಕ ಸರ್ವೆ ಕಾರ್ಯ ನಡೆಸಿದ ಭಾರತೀಯ ಪುರಾತತ್ವ ಸಂಶೋಧನಾ ಇಲಾಖೆಯು ತನ್ನ ವರದಿಯಲ್ಲಿ ಹಲವು ಅಚ್ಚರಿಯ ಮಾಹಿತಿಗಳನ್ನು ಬಹಿರಂಗಪಡಿಸಿದೆ. ವಾರಣಾಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗಿದ್ದ ವರದಿಯನ್ನು ನ್ಯಾಯಾಲಯ ಹಿಂದೂ ಹಾಗೂ ಮುಸ್ಲಿಂ ಕಕ್ಷೀದಾರರಿಗೆ ನೀಡಿತ್ತು. ಈ ವರದಿಯಲ್ಲಿ ಏನಿದೆ ಅನ್ನೋದನ್ನ ಬಹಿರಂಗಪಡಿಸಿರುವ ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್, ಮಸೀದಿಯು ದೇಗುಲದ ಮೇಲೆ ನಿರ್ಮಾಣಗೊಂಡಿದೆ ಅನ್ನೋದು ಸಮೀಕ್ಷೆಯಲ್ಲಿ ಸಾಬೀತಾಗಿದೆ ಎಂದಿದ್ದಾರೆ. ಜೊತೆಯಲ್ಲೇ ಕನ್ನಡಿಗರಿಗೂ ಅಚ್ಚರಿ ಪಡುವಂಥಾ ಮಾಹಿತಿಯೊಂದನ್ನು ನೀಡಿದ್ದಾರೆ.

ಈ ಹಿಂದೆ ದೇಗುಲವಾಗಿದ್ದ ಜ್ಞಾನವಾಪಿಯಲ್ಲಿ ಪುರಾತತ್ವ ಸರ್ವೆ ಇಲಾಖೆಗೆ ಒಟ್ಟು 34 ಶಿಲಾ ಶಾಸನಗಳು ಪತ್ತೆಯಾಗಿವೆ. ಈ ಪೈಕಿ ಕನ್ನಡದ ಶಿಲಾ ಶಾಸನವೂ ಇದೆ. ಕನ್ನಡ ಭಾಷೆಯಲ್ಲಿ ಇರುವ ಶಿಲಾ ಶಾಸನದ ಜೊತೆಯಲ್ಲೇ ತೆಲುಗು, ದೇವನಾಗರಿ ಭಾಷೆಗಳಲ್ಲೂ ಶಿಲಾ ಶಾಸನಗಳಿವೆ. ದೇವತೆಗಳಾದ ಜನಾರ್ದನ, ರುದ್ರ ಹಾಗೂ ಉಮೇಶ್ವರನ ಹೆಸರುಗಳು ಈ ಶಾಸನಗಳಲ್ಲಿ ಪತ್ತೆಯಾಗಿವೆ. ಮಸೀದಿಯಲ್ಲಿತ್ತು ವಿರೂಪಗೊಂಡ ಶಿವಲಿಂಗ ಗಣೇಶ, ಹನುಮ ಮೂರ್ತಿ ಪತ್ತೆಯಾಗಿವೆ.

ಕೆಲವು ಶಾಸನಗಳನ್ನು ಧ್ವಂಸ ಮಾಡಲಾಗಿದೆ. ಇನ್ನೂ ಕೆಲವು ಶಾಸನಗಳನ್ನು ಹಾಲಿ ಇರುವ ಕಟ್ಟಡಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ ಎಂದೂ ಸರ್ವೆಯಲ್ಲಿ ತಿಳಿಸಲಾಗಿದೆ. ಈ ಎಲ್ಲಾ ಶಿಲಾ ಶಾಸನಗಳೂ ಕೂಡಾ ಈ ಹಿಂದೆ ಇಲ್ಲಿ ದೇಗುಲ ಇತ್ತು ಅನ್ನೋದಕ್ಕೆ ಕುರುಹುಗಳಾಗಿವೆ ಎಂದು ಅಧ್ಯಯನ ವರದಿ ವಿವರಿಸಿದೆ.

17ನೇ ಶತಮಾನದಲ್ಲಿ ಇಲ್ಲಿ ಆದಿ ವಿಶ್ವೇಶ್ವರನ ದೇಗುಲ ಇತ್ತು. ಆ ದೇಗುಲಕ್ಕೆ ಇತ್ತು ಅನ್ನೋದಕ್ಕೆ ಇದೀಗ ವೈಜ್ಞಾನಿಕ ಸಾಕ್ಷ್ಯ ಸಿಕ್ಕಿದೆ. ಮೊಘಲ್ ಸಾಮ್ರಾಜ್ಯದ ದೊರೆ ಔರಂಗಜೇಬನ ಸೈನ್ಯ 17ನೇ ಶತಮಾನದಲ್ಲಿ ಈ ದೇಗುಲವನ್ನು ಧ್ವಂಸ ಮಾಡಿ ಅದರ ಮೇಲೆ ಮಸೀದಿ ನಿರ್ಮಿಸಿತ್ತು. ಔರಂಗಜೇಬನ ಆದೇಶದ ಮೇರೆಗೆ ಈ ಕೃತ್ಯ ಎಸಗಲಾಗಿತ್ತು.ಎಎಸ್‌ಐ ಸರ್ವೆ ವೇಳೆ ಮಸೀದಿಯಲ್ಲಿ ಲೆಕ್ಕವಿಲ್ಲದಷ್ಟು ಹಿಂದೂ ದೇವರ ಮೂರ್ತಿಗಳು ಪತ್ತೆಯಾಗಿವೆ. ಕೆಲವು ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ. ಮತ್ತೆ ಕೆಲವನ್ನು ಗೋಡೆಯಲ್ಲಿ ಗಾರೆ ಸಮೇತ ಮುಚ್ಚಲಾಗಿದೆ.

ಮೂರ್ತಿಗಳ ಜೊತೆಗೆ ಕೆತ್ತನೆ ಮಾಡಲಾಗಿದ್ದ ಪಕ್ಷಿಗಳು ಹಾಗೂ ಪ್ರಾಣಿಗಳ ಪ್ರತಿಕೃತಿಗಳೂ ಕೂಡಾ ಹಾಗೆಯೇ ಇವೆ. ಇನ್ನು ಮಸೀದಿ ಒಂದು ರೂಂನಲ್ಲಿ ಫಲಕ ಕೂಡಾ ಸಿಕ್ಕಿದೆ. ಈ ಫಲಕದಲ್ಲಿ ಔರಂಗಜೇಬನ ಕಾಲದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿತ್ತು ಎಂಬ ಮಾಹಿತಿ ಇದೆ. ಅರೇಬಿಕ್ ಪರ್ಷಿಯನ್ ಭಾಷೆಯಲ್ಲಿ ಈ ಶಾಸನ ಇದೆ.

ಜ್ಞಾನವಾಪಿ ಮಸೀದಿಯ ಒಂದು ಪಾರ್ಶ್ವದ ಗೋಡೆಯಲ್ಲಿ ಇರುವ ಶೃಂಗಾರ ಗೌರಿ ಪೂಜೆಗೆ ಅವಕಾಶ ನೀಡಬೇಕೆಂದು ಐವರು ಹಿಂದೂ ಮಹಿಳೆಯರು ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಮೂಲಕ ಪ್ರಕರಣದ ಕಾನೂನು ಹೋರಾಟ ಶುರುವಾಗಿತ್ತು. ಜ್ಞಾನವಾಪಿ ಬಾವಿಯ ಒಳಗೆ ಶಿವಲಿಂಗ ಸಿಕ್ಕಿದೆ ಅನ್ನೋ ವಿಚಾರ ಕೂಡಾ ಈ ಹಿಂದೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!