ಮಂಗಳೂರು: ಅನಿಲ್ ಸಿಕ್ವೇರಾ ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಆಯ್ಕೆ.!
25ನೇ ವಯಸ್ಸಿಗೆ ಜಡ್ಜ್ ಆದ ಬಂಟ್ವಾಳದ ಅನಿಲ್ ಜಾನ್ ಸಿಕ್ವೆರಾ

ಮಂಗಳೂರು : ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ ತನ್ನ 25ನೇ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಚಿಕ್ಕ ವಯಸ್ಸಿನ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೂಲಕ ಕರಾವಳಿ ಜಿಲ್ಲೆಯ ಅನಿಲ್ ಅಪರೂಪದ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ. ಅನಿಲ್ ಜಾನ್ ಸಿಕ್ವೇರಾ ಅವರು ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹೀಗೆ 2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಸದ್ಯ ಸಿವಿಲ್ ನ್ಯಾಯಧೀಶರಾಗಿ ಕಾರ್ಯನಿರ್ವಹಿಸಲಿದ್ದಾರೆ. 

ಅನಿಲ್ ಜಾನ್ ಡಿಸೋಜ ಪರಿಶ್ರಮಿ. ಏಕಾಗ್ರತೆಯಿಂದ ಕಲಿತಿದ್ದಾರೆ. ಅವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇಂದು ತನ್ನ 25ನೆ ಹರೆಯದಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮಂಗಳೂರಿನ ನ್ಯಾಯವಾದಿ ದೀಪಕ್ ಡಿಸೋಜ ತಿಳಿಸಿದ್ದಾರೆ. ಅನಿಲ್ ಅವರು ದೀಪಕ್ ಡಿಸೋಜರ ಬಳಿ ಮಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದರು. ಮಂಗಳೂರು ಬಾರ್ ಅಸೋಸಿಯೇಶನ್‌ನ ಸದಸ್ಯರೂ ಆಗಿದ್ದರು.

ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ ಅನಿಲ್‌ ಜಾನ್‌ ಸಿಕ್ವೆರಾ ಮಂಗಳೂರಿನ ಎಸ್‌ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್​ಬಿ ಪೂರೈಸಿದ್ದಾರೆ. ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಇವರು ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್​ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಕಾನೂನು ಪದವಿ ಬಳಿಕ ಮಂಗಳೂರಿನಲ್ಲಿ ಬಾ‌ರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯಸ್ ರೊಂದಿಗೆ ವೃತ್ತಿ ನಿರ್ವಹಿಸುತ್ತಿದ್ದರು. ಅನಿಲ್ ಜಾನ್ ಸಿಕ್ವೆರಾ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ತಮ್ಮ ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ಕಾಲೇಜು ದಿನಗಳಲ್ಲಿಯೇ ನಾಯಕತ್ವ ಬೆಳೆಸಿಕೊಂಡಿದ್ದ ಅನಿಲ್ ಸಿಕ್ವೆರಾ 2022ರಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಇಂಡಿಯನ್ ಕೆಥೋಲಿಕ್ ಯೂತ್ ಮೂಮೆಂಟ್ ಸಂಘಟನೆ ಅಧ್ಯಕ್ಷರಾಗಿದ್ದರು. ಅನಿಲ್ ಸಿಕೆರಾ ಅವರು ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು ಪ್ರಿಲಿಮಿನರಿ, ಮೈನ್ಸ್ ಮತ್ತು ಸಂದರ್ಶನ ಪಾಸ್ ಮಾಡುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!