ಕರಾವಳಿಯಲ್ಲಿ ಬಿರು ಬೇಸಿಗೆ, ಮುನ್ನೆಚ್ಚರಿಕೆ ವಹಿಸಲು ಸೂಚನೆ: ಮಂಗಳೂರು, ಮೂಡುಬಿದಿರೆ ಸಾಮಾನ್ಯ ಬರಪೀಡಿತ ತಾಲೂಕು.!
ಬೇಸಿಗೆಯ ವಾತಾವರಣ, ಉಷ್ಣಾಂಶ ಏರಿಕೆ
ಮಂಗಳೂರು, ಮೂಡುಬಿದಿರೆ ಸಾಮಾನ್ಯ ಬರಪೀಡಿತ ತಾಲೂಕು ಘೋಷಣೆ

ಮಂಗಳೂರು: ಕರಾವಳಿಯಲ್ಲಿ ಬೇಸಿಗೆಯ ವಾತಾವರಣವಿದ್ದು, ಉಷ್ಣಾಂಶ ಏರಿಕೆಯಾಗಿದೆ. ಜಿಲ್ಲೆಯ ಮಂಗಳೂರು ಮತ್ತು ಮೂಡುಬಿದಿರೆ ತಾಲೂಕನ್ನು ಸಾಮಾನ್ಯ ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಪ್ರಕಟಿಸಿದೆ. ಉಷ್ಣಾಂಶದ ಏರಿಕೆಯ ವಾತಾವರಣದ ಆದ್ರತೆಯು ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಅದರಲ್ಲೂ ದನ ಹಾಗೂ ಮಾಂಸ ಕೋಳಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ದನಗಳಲ್ಲಿ ಉಷ್ಣಾಂಶದ ಒತ್ತಡದಿಂದ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗಿ ಹಾಲಿನ ಇಳುವರಿಯೂ ಕಡಿಮೆಯಾಗುತ್ತದೆ. ಇನ್ನೂ ಹೆಚ್ಚಿನ ಬಿಸಿಲಿನ ತಾಪಮಾನದಿಂದಾಗಿ ಸಾಯುವ ಸಾಧ್ಯತೆಯೂ ಇರುತ್ತದೆ.

ಕೋಳಿಗಳು ಆಹಾರ ತಿನ್ನುವ ಪ್ರಮಾಣವು ಗಣನೀಯ ಕಡಿಮೆಯಾಗಿ ಅವುಗಳ ನಿಗದಿತ ತೂಕ ಬಾರದಿರಬಹುದು ಅಥವಾ ಉಷ್ಣಾಂಶದ ಪ್ರಮಾಣ ಹೆಚ್ಚಾಗಿ ಕೋಳಿಗಳು ಸಾಯುವ ಸಾಧ್ಯತೆಯಿರುತ್ತದೆ. ಉಷ್ಣಾಂಶದ ಒತ್ತಡದಲ್ಲಿ ಬಳಲಿದ ಪ್ರಾಣಿ ಪಕ್ಷಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ದನಗಳಲ್ಲಿ ಕೆಚ್ಚಲು ಬಾವು, ಕೋಳಿಗಳಲ್ಲಿ ಕೊಕ್ಕರೆ ರೋಗಗಳು ಕಂಡುಬರುತ್ತದೆ. 

ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ದನಗಳನ್ನು ಮೇಯಲು ಬೆಳಗ್ಗೆ ಅಥವಾ ಸಂಜೆ ಹೊರಗಡೆ ಬಿಡಬೇಕು. ಯಾವುದೇ ಕಾರಣಕ್ಕೂ ಪೂ.11ರಿಂದ ಸಂಜೆ 4ರ ಮಧ್ಯೆ ಜಾನುವಾರುಗಳನ್ನು ಹೊರಗಡೆ ಬಿಡಬಾರದು. ದಿನದ 24 ಗಂಟೆಯೂ ತಂಪಾದ ನೀರು ನೀಡಬೇಕು. ನೀರಿನ ಕೊರತೆ ಕಂಡುಬಂದರೆ ಸ್ಥಳೀಯ ಸಂಸ್ಥೆಗಳ ಮೂಲಕ ಪಡೆದುಕೊಳ್ಳಬೇಕು. ಜಾನುವಾರುಗಳನ್ನು ನೆರಳಿನಲ್ಲಿ ಮಾತ್ರ ಹೊರಗಡೆ ಕಟ್ಟಬೇಕು.ಜಾನುವಾರು ಶೆಡ್ ಮೇಲೆ ತೆಂಗಿನ ಅಥವಾ ಅಡಿಕೆ ಗರಿ ಹಾಕಿ ಸ್ಪಿಂಕ್ಲರ್‌ನಲ್ಲಿ ನೀರು ಚಿಮ್ಮಿಸಬಹುದು ಅಥವಾ ಬಿಳಿ ಬಣ್ಣದ ಪೇಂಟ್ ಹಾಕಬಹುದು. ಶೆಡ್‌ನ ಒಳಗಡೆ ಫ್ಯಾನ್‌ಗಳನ್ನು ಅಳವಡಿಸಿದರೆ ಉಷ್ಣಾಂಶದ ಪ್ರಮಾಣ ತಗ್ಗಿಸಬಹುದು. ಒದ್ದೆಯಾದ ಗೋಣಿ ಚೀಲಗಳನ್ನು ಶೆಡ್‌ನ ಸುತ್ತಲೂ ಕಟ್ಟಬಹುದು ಎಂದು ರೈತರಿಗೆ ಸೂಚಿಸಲಾಗಿದೆ.

ಪ್ರತಿ ಗಂಟೆಗೊಮ್ಮೆ ಜಾನುವಾರುಗಳ ಮೈಮೇಲೆ 1-2 ನಿಮಿಷ ನೀರು ಚಿಮುಕಿಸುತ್ತಿರಬೇಕು. ಜಾನುವಾರುಗಳಿಗೆ ಹೆಚ್ಚಿನ ಆಹಾರವನ್ನು ಬೆಳಗ್ಗೆ ಬೇಗನೆ ಮತ್ತು ರಾತ್ರಿ ಹೊತ್ತಿನಲ್ಲಿ ತಿನ್ನಿಸುವುದು ಉತ್ತಮ. ಜಾನುವಾರುಗಳಿಗೆ ಅವುಗಳ ಹಾಲಿನ ಇಳುವರಿಗೆ ಅನುಗುಣವಾಗಿ 20-100 ಗ್ರಾಂನಷ್ಟು ಲವಣ ಮಿಶ್ರಣವನ್ನು ಪ್ರತಿ ದಿನ ನೀಡಬೇಕು. ಜಾನುವಾರುಗಳಿಗೆ ಪ್ರಜ್ಞೆ ತಪ್ಪುವುದು, ತುಂಬಾ ಹಾಲಿನ ಇಳುವರಿ ಕಡಿತವಾಗುವುದು ಕಂಡುಬಂದಲ್ಲಿ ತಕ್ಷಣ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಭೇಟಿ ಮಾಡಬಹುದು ಎಂದು ಪ್ರಕಟನೆ ತಿಳಿಸಿದೆ. 

ಕೋಳಿಗೆ ದಿನದ 24 ಗಂಟೆಗಳ ಕಾಲ ತಂಪಾದ ಮತ್ತು ಶುದ್ಧ ನೀರನ್ನು ಒದಗಿಸಬೇಕು. 1 ಗಂಟೆ ನೀರು ಇಲ್ಲದಿದ್ದರೆ ಕೋಳಿಗಳು ಸಾವನ್ನಪ್ಪಬಹುದು. ಚೆನ್ನಾಗಿ ಗಾಳಿಯಾಡಲು ವ್ಯವಸ್ಥೆ ಕಲ್ಪಿಸಬೇಕು. ಕೋಳಿಯ ಗೂಡಿನ ಮೇಲ್ಭಾಗಕ್ಕೆ ಸುಣ್ಣ ಬಳಿಯಬೇಕು ಆಥವಾ ಹುಲ್ಲು ಅಡಿಕೆ ಗರಿ, ತೆಂಗಿನ ಗರಿಗಳಿಂದ ಹೊದಿಸಬೇಕು. ಅನುಕೂಲವಿದ್ದರೆ ಕೋಳಿಗೂಡಿನ ಮೇಲೆ ಸ್ಪ್ರಿಂಕ್ಲರ್‌ನಿಂದ ನೀರು ಸಿಂಪಡಿಸಬೇಕು.

ಕೋಳಿ ಮನೆಯ ಒಳಗೆ ಫ್ಯಾನ್ ಅಥವಾ ಫಾಗರ್ಸ್‌ಗಳನ್ನು ಅಳವಡಿಸಬೇಕು. ವಿಟಮಿನ್ ಸಿ ಮತ್ತಿತರ ಇಲೆಕ್ಟ್ರೋಲೈಟ್‌ ಗಳನ್ನು ಉಪಯೋಗಿಸುವುದರಿಂದ ಕೋಳಿಗಳ ಮೇಲೆ ಆಗುವ ಬಿಸಿಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಆಥವಾ ಅಡುಗೆ ಸೋಡ 1 ಗ್ರಾಂನ್ನು 5 ಲೀಟರ್ ನೀರಿಗೆ ಬೆರೆಸಿ ಕೋಳಿಗಳಿಗೆ ಕುಡಿಯಲು ನೀಡಬೇಕು. ಕೋಳಿಗೆ ನೀಡುವ ನೀರಿನ ಟ್ಯಾಂಕಿನ ಹೊರಮೈಗೆ ಬಿಳಿಬಣ್ಣ ಬಳಿಯಬೇಕು ಅಥವಾ ಗೋಣಿಯನ್ನು ಸುತ್ತಲೂ ಕಟ್ಟಿ ದಿನಕ್ಕೆರಡು ಬಾರಿ ನೀರಿನಿಂದ ಒದ್ದೆ ಮಾಡಬೇಕು ಅಥವಾ ಚಪ್ಪರ ಹಾಕಬೇಕು. ಬೇಸಿಗೆ ಅವಧಿಯಲ್ಲಿ ನೀರಿನಲ್ಲಿ ಹಾನಿಕಾರಕ ಸೂಕ್ಷ್ಮ ಜೀವಿಗಳು ಹೆಚ್ಚಿರುವುದರಿಂದ ಸೋಂಕು ನಿವಾರಕಗಳನ್ನು ಉಪಯೋಗಿಸಬೇಕು. ಅತಿ ಉಷ್ಣ ಹಾಗೂ ಮೋಡ ಕವಿದ ವಾತಾವರಣವಿದ್ದಾಗ ಮಧ್ಯಾಹ್ನ 1ರಿಂದ ಸಂಜೆ 5ರ ತನಕ ಕೋಳಿಗಳ ಮೇಲೆ ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಕೋಳಿಗೂಡಿನ ಒಳಗೆ ಬಿಸಿಲು ಬೀಳದಂತೆ ಎಚ್ಚರ ವಹಿಸಬೇಕು. 

ಬೇಸಿಗೆಯಲ್ಲಿ ಕೋಳಿಗಳು 20 ದಿನದ ನಂತರ ಆ ದಿನಕ್ಕೆ ನಿಗದಿಪಡಿಸಿದ ಕೋಳಿ ಆಹಾರ ತಿನ್ನುವ ಸಾಧ್ಯತೆ ಕಡಿಮೆ. ಆದ್ದರಿಂದ ರೈತರು ರಾತ್ರಿ 12ರ ತನಕ ಅಥವಾ ಮುಂಜಾವ 4ರಿಂದ 8ರ ಅವಧಿಯಲ್ಲಿ ಕೋಳಿಗಳಿಗೆ ಅಹಾರ ಒದಗಿಸಬೇಕು. ಪ್ರಾಣಿ ಪಕ್ಷಿಗಳಿಗೆ ಮನೆ ಅಥವಾ ತೋಟದ ಆಸುಪಾಸು ಸ್ವಚ್ಛ ನೀರು ಸಿಗುವಂತೆ ವ್ಯವಸ್ಥೆ ಮಾಡಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!