ಹೆಚ್ಚಿದ ಬಿಸಿಲು; ಅರ್ಧ ದಿನ ರಜೆ ನೀಡುವಂತೆ ಪೌರಕಾರ್ಮಿಕರ ಒತ್ತಾಯ.!
ಹೆಚ್ಚಿದ ಬಿಸಿಲು; ಅರ್ಧ ದಿನ ರಜೆ ನೀಡುವಂತೆ ಪೌರಕಾರ್ಮಿಕರ ಒತ್ತಾಯ.!

ರಾಜಧಾನಿ ಬೆಂಗಳೂರಿನಲ್ಲಿ ಉಷ್ಣಾಂಶ ಅಧಿಕವಾಗಿರುವ ಹಿನ್ನೆಲೆ ವೇತನ ಕಡಿತ ಮಾಡದೆ ಅರ್ಧ ದಿನ ರಜೆ ನೀಡಬೇಕು ಎಂದು ಪೌರಕಾರ್ಮಿಕರು ಆಗ್ರಹಿಸಿದ್ದಾರೆ. 

ಈ ಕುರಿತು ಅಖಿಲ ಭಾರತ ಕಾರ್ಮಿಕ ಸಂಘಗಳ ಒಕ್ಕೂಟವು ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳಿಗೆ ಪತ್ರ ಬರೆದು, ಪೌರಕಾರ್ಮಿಕರಿಗೆ ಶಾಖದ ಹೊಡೆತದಿಂದ ರಕ್ಷಿಸಿಕೊಳ್ಳಲು ಹೆಚ್ಚುವರಿ ವಿರಾಮದೊಂದಿಗೆ ಕುಡಿಯುವ ನೀರು, ಒಆರ್‌ಎಸ್ ಮತ್ತು ಮಜ್ಜಿಗೆ ನೀಡಬೇಕು ಎಂದು ಒತ್ತಾಯಿಸಿದೆ. 

ಅದೇ ರೀತಿ, ಶುದ್ಧ ನೀರು ಮತ್ತು ನೈರ್ಮಲ್ಯದ ಶೌಚಾಲಯಗಳಿಂದ ವಂಚಿತರಾಗಿರುವ ಪೌರಕಾರ್ಮಿಕರು ಶಾಖ-ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಕಳೆದ ಕೆಲವು ವಾರಗಳಿಂದ ತೀವ್ರತರವಾದ ಶಾಖದಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ದಣಿವಾಗುತ್ತಿದೆ. ಕೆಲವರಿಗೆ ಕೆಲಸದ ವೇಳೆ ಆಯಾಸ, ತಲೆತಿರುಗುವಿಕೆ ಸಮಸ್ಯೆ ಕಾಣಿಸಿಕೊಂಡಿದೆ. ಬೇಸಗೆಯ ಮಟ್ಟಿಗೆ ಕೆಲಸದ ಅವಧಿ ಕಡಿಮೆ ಮಾಡಿ ವಿರಾಮ ನೀಡುವ ಅಗತ್ಯವಿದೆ ಎಂದು ಹಲವು ಮಂದಿ ಪೌರಕಾರ್ಮಿಕರು ಮನವಿ ಮಾಡಿಕೊಂಡಿದ್ದಾರೆ. 

ಪೌರಕಾರ್ಮಿಕರು ಬೆಳಿಗ್ಗೆ 6 ಗಂಟೆಗೆ ಕೆಲಸ ಪ್ರಾರಂಭಿಸುತ್ತಾರೆ. ಪ್ರತಿದಿನ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಕೆಲವೊಮ್ಮೆ ಇದನ್ನು ಮಧ್ಯಾಹ್ನ 2.30 ರವರೆಗೆ ವಿಸ್ತರಿಸಲಾಗುತ್ತದೆ.ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಧ್ಯಾಹ್ನ 11ರಿಂದ 3 ಗಂಟೆಯ ಅವಧಿಯಲ್ಲಿ ಮನೆಯೊಳಗೆ ಇರಲು ಸೂಚನೆ ನೀಡಿರುವುದನ್ನು ಉಲ್ಲೇಖಿಸಿ, ಕೆಲಸದ ಸಮಯವನ್ನು ಬೆಳಿಗ್ಗೆ 11 ಕ್ಕೆ ಕಡಿತಗೊಳಿಸಬೇಕೆಂದು ಒಕ್ಕೂಟ ಮನವಿ ಮಾಡಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!