ಕೆಲಸ ಮಾಡದೇ ಹೋದಲ್ಲಿ ಗುತ್ತಿಗೆದಾರರು ಕಪ್ಪುಪಟ್ಟಿಗೆ ...
ಗುತ್ತಿಗೆದಾರರಿಗೆ ಶಾಸಕರಾದ ಡಾ. ಭರತ್ ಶೆಟ್ಟಿ Y. ಎಚ್ಚರಿಕೆ...

ಸುರತ್ಕಲ್: ಮನಪಾ ಸದಸ್ಯರು ದೂರು ನೀಡಿದರೆ ನಿರ್ಲಕ್ಷ್ಯ ಮಾಡುವಂತಿಲ್ಲ. ಗುತ್ತಿಗೆದಾರರಲ್ಲಿ ಕೆಲಸ ಮಾಡಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಎಚ್ಚರಿಕೆ ನೀಡಿದ ಬಳಿಕವೂ ಸಮರ್ಪಕ ಕೆಲಸ ಮಾಡದೇ ಹೋದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ  ಎಚ್ಚರಿಸಿದರು...

ಸುರತ್ಕಲ್ ಪಾಲಿಕೆ ವಲಯ ಕಚೇರಿಯಲ್ಲಿ  ವಿಭಾಗೀಯ ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

 ಬೀದಿ ದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ  ದೂರು ಬಂದಿದ್ದು ಕಾಲಮಿತಿಯೊಳಗೆ ದುರಸ್ತಿ ಮಾಡುವ ಎಲ್ಲಾ  ಜವಾಬ್ದಾರಿಯನ್ನು  ಎಂಜಿನಿಯರ್ಸ್ ಹೊರಬೇಕು. ಸಮಸ್ಯೆಯಿದ್ದರೆ ಕುಂದುಕೊರತೆ ಸಭೆಯಲ್ಲಿ ಹೇಳಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಯರ್ ಜಯಾನಂದ ಅಂಚನ್ ಮಾತನಾಡಿ, ಅಧಿಕಾರಿಗಳ ಮಾತಿಗೆ ಗುತ್ತಿಗೆದಾರರು ಬೆಲೆ ನೀಡುತ್ತಿಲ್ಲ. ಇನ್ನು ಮನಪಾ ಸದಸ್ಯರ ದೂರಿಗೆ ಹೇಗೆ ಸ್ಪಂದಿಸುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ನಿಗದಿತ ಸಮಯಕ್ಕೆ ದುರಸ್ತಿ ಕಾರ್ಯ ಮಾಡಲೇಬೇಕು. ಜನರು ಬೇಸತ್ತು ಶಾಸಕರಿಗೆ ದೂರವಾಣಿ ಕರೆ ಮಾಡುವ ಸ್ಥಿತಿ ತಂದು ಇಟ್ಟಿದ್ದೀರಿ ಎಂದು ಕಿಡಿಕಾರಿದರು.

ಹುಲ್ಲು ಕಟ್ಟಿಂಗ್ ಕೆಲಸದಲ್ಲಿ ಪ್ರತೀ ವಾರ್ಡ್‍ಗೆ 5 ಜನ ಕಾರ್ಮಿಕರಿರಬೇಕು. ಕೆಲವೆಡೆ ಮೂರು ಜನ ಮಾತ್ರ ಇದ್ದಾರೆ ಎಂದು ಮನಪಾ ಸದಸ್ಯರು ದೂರಿಕೊಂಡಾಗ ಕಾರ್ಮಿಕರ ಸಂಖ್ಯೆ ಪಟ್ಟಿ ಕೊಡುವಂತೆ ಆಯುಕ್ತ ಅಕ್ಷಯ್ ಶ್ರೀಧರ್ ಸೂಚಿಸಿದರು. ಸಮಯ ಪರಿಪಾಲನೆ ಸರಿಯಾಗಿ ಮಾಡುತ್ತಿಲ್ಲ. ಕೆಲವೆಡೆ ಬಸ್ಸಿಲ್ಲ ಎಂದು ಮಧ್ಯಾಹ್ನವೇ ಹೋಗುತ್ತಾರೆ. ಬೆಳಗ್ಗೆ 8 ಗಂಟೆಗೆ ಇರಬೇಕಾದ ಕಾರ್ಮಿಕರು ಕೆಲವೆಡೆ ಹತ್ತು ಗಂಟೆಯಾದರೂ ಕೆಲಸದಲ್ಲಿ ನಿರತರಾಗಿರುವುದಿಲ್ಲ  ಎಂಬ ದೂರು  ಕೇಳಿ ಬಂತು.

ತ್ಯಾಜ್ಯ ವಿಲೇವಾರಿ, ಹುಲ್ಲು ವಿಲೇವಾರಿಗೆ ಲಾರಿಗಳು ಸಿಗುತ್ತಿಲ್ಲ.ರಸ್ತೆ ಬದಿ ಹುಲ್ಲು ರಾಶಿ ತೆಗೆಯುವುದಿಲ್ಲ.ಇದನ್ನು ವಿಲೇವಾರಿ ಮಾಡಬೇಕು. ಕಸ ಬೀಳುವ ಸ್ಥಳವನ್ನು ಸ್ವಚ್ಚಗೊಳಿಸುವುದು,ಕಸ ವಿಂಗಡಿಸುವುದು ಅಗತ್ಯವಾಗಿ ಆಗಬೇಕು. ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ಶಾಸಕರು ನುಡಿದರು.

ಹೊಸಬೆಟ್ಟು ಬಳಿ ಬೇರೆ ಕಂಪನಿಯವರು ಪೈಪ್ ಲೈನ್ ಹಾಕುವಾಗ ಕುಡಿಯುವ ನೀರಿನ ಪೈಪ್‍ಗೆ ದಕ್ಕೆಯಾಗಿದೆ. ಕೆಸರು ತುಂಬಿ ನೀರು  ಸರಿಯಾಗಿ ಬರುತ್ತಿಲ್ಲ ಎಂದಾಗ ಪೈಪ್ ಲೈನ್ ಬ್ಲಾಕ್ ಆದ ಸ್ಥಳ ಗುರುತಿಸಿ ಸ್ವಚ್ಚ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಎಂಜಿನಿಯರ್ ಮಾಹಿತಿ ನೀಡಿದರು.

ಇ ಖಾತಾ ಆನ್‍ಲೈನ್ ಸಮಸ್ಯೆಯೂ ಹೆಚ್ಚಿದ್ದು ಮಂಗಳೂರು ವನ್ ಕೇಂದ್ರದ ಮೂಲಕ ಇದೀಗ ನೀಡುವ ಕೆಲಸ ಆಗುತ್ತಿದೆ.ಇದೇ ವೇಳೆ ಪಾಲಿಕೆ ಕಚೇರಿಯಲ್ಲಿ ಕಡತ ವಿಲೇವಾರಿ ವಿಳಂಬವಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮ ಜರುಗಿಸಿ ಎಂದು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇನ್ನು ಪ್ರಮುಖ ರಸ್ತೆಗಳಲ್ಲಿ ಹೊಂಡವಿದ್ದರೆ ಮುಚ್ಚಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಶಾಸಕರು ಸೂಚಿಸಿದಾಗ ಆಯುಕ್ತರು ಕ್ರಮ ಜರುಗಿಸುವುದಾಗಿ ನುಡಿದರು. 

ಸಭೆಯಲ್ಲಿ  ಮನಪಾ ಸದಸ್ಯರಾದ ನಯನ ಆರ್.ಕೋಟ್ಯಾನ್, ಶೋಭಾ ರಾಜೇಶ್, ವರುಣ್ ಚೌಟ, ಸುನಿತಾ, ಸರಿತ ಶಶಿಧರ್,ಶ್ವೇತ ಎ, ಲೋಕೇಶ್ ಬೊಳ್ಳಾಜೆ, ಲಕ್ಷ್ಮೀ ಶೇಖರ್ ದೇವಾಡಿಗ, ವೇದಾವತಿ, ವಲಯ ಆಯುಕ್ತೆ ವಾಣಿ ಆಳ್ವ , ವಿವಿಧ ಇಲಾಖೆಯ ಹಿರಿಯ ಅ„ಕಾರಿಗಳು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!