ಮಂಗಳೂರು: ರಾತ್ರಿ ಹೊತ್ತಲ್ಲಿ ಫೀಲ್ಡಿಗಿಳಿದ ದರೋಡೆ ಗ್ಯಾಂಗ್.!!‌
ವಾಹನ ಅಡ್ಡಗಟ್ಟಿ ತಲವಾರ್‌ ಹಿಡಿದು ಹಣಕ್ಕೆ ಬೇಡಿಕೆ; ಭಯದ ವಾತಾವರಣ

ಮಂಗಳೂರು : ನಿಡ್ಡೋಡಿಯಿಂದ ಕಟೀಲು ಕಡೆಗೆ ಹೋಗುವ ರಸ್ತೆಯಲ್ಲಿ ರಾತ್ರಿ ಹೊತ್ತಿನಲ್ಲಿ ದರೋಡೆ ಗ್ಯಾಂಗೊಂದು ಫೀಲ್ಡಿಗಿಳಿದಿದ್ದು ಈ ರಸ್ತೆಯಲ್ಲಿ ಸಂಚರಿಸುವ ಸವಾರರು, ಸ್ಥಳೀಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. 

ಕಳೆದ ರಾತ್ರಿ ವೇಣೂರಿನ ವ್ಯಕ್ತಿಯೋರ್ವರು ಸ್ಕೂಟರ್ ನಲ್ಲಿ ಈ ರಸ್ತೆಯಲ್ಲಿ  ಬರುತ್ತಿರುವಾಗ ಅಪರಿಚಿತ ವ್ಯಕ್ತಿಯೋರ್ವ ಸ್ಕೂಟರನ್ನು ತಡೆದು ನಿಲ್ಲಿಸಿದ್ದಾನೆ. ಅದೇ ವೇಳೆ ರಸ್ತೆಯ ಮತ್ತೊಂದು ಕಡೆಯಿಂದ ಇಬ್ಬರು ಮುಸುಕುಧಾರಿಗಳು ತಲವಾರಿನೊಂದಿಗೆ ಬಂದು ಹಣಕ್ಕಾಗಿ ಬೇಡಿಕೆಯಿಟ್ಟು ಕಿಸೆಗೆ ಕೈ ಹಾಕಿ ಬೆದರಿಸಿದ್ದಾರೆನ್ನಲಾಗಿದೆ. ಇದರಿಂದ ಭಯಗೊಂಡ ಆ ವ್ಯಕ್ತಿ ಸ್ಕೂಟರ್ ಬಿಟ್ಟು ಓಡಿ ಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಕೆಲ ಮುಖಂಡರು ಅವರನ್ನು ತಡೆದು ವಿಚಾರಿಸಿದಾಗ ನಡೆದ ಸಂಗತಿಯನ್ನು ವಿವರಿಸಿದ್ದಾರೆ. ಬಾರೀ ಗಾಬರಿ ಹಾಗೂ ಭಯಗೊಂಡಿದ್ದ ಆ ವ್ಯಕ್ತಿಯನ್ನು ಸಮಾಧಾನಿಸಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಪೊಲೀಸರಿಗೆ ಮಾಹಿತಿ ನೀಡುವ ಕೆಲಸವನ್ನು ಆ ಮುಖಂಡರು ಮಾಡಿದ್ದಾರೆ. 

ಇದು ಮೊದಲ ಪ್ರಕರಣವೇನಲ್ಲ, ಇಂತಹ ಘಟನೆಗಳು ಈ ಪ್ರದೇಶದಲ್ಲಿ ಈ ಹಿಂದೆ ಸಾಕಷ್ಟು ಬಾರಿ ನಡೆದಿದೆಯೆನ್ನಲಾಗಿದೆ. ನಿಡ್ಡೋಡಿ-ಕಟೀಲು ರಸ್ತೆಯಲ್ಲಿ ಹೆಚ್ಚು ವಾಹನಗಳು ಓಡಾಡುವುದಿಲ್ಲ. ಬಹಳಷ್ಟು ಸಮೀಪವಾಗುತ್ತದೆ ಎಂದು ಹೋಗುವವರಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಹೆಚ್ಚು ನಿರ್ಜನ ಪ್ರದೇಶವವಾಗಿದ್ದು ದರೋಡೆ ಗ್ಯಾಂಗ್ ಇಂತಹ ಪ್ರದೇಶವನ್ನೇ ಆಯ್ಕೆ ಮಾಡಿ ಕಾರ್ಯಾಚರಿಸುತ್ತದೆ. ಈ ಬಗ್ಗೆ ಪೊಲೀಸರಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆನ್ನಲಾಗಿದೆ. 

ಪೊಲೀಸರು ಈ ರಸ್ತೆಯಲ್ಲಿ ಸೈರನ್, ಕೆಂಪು ಲೈಟ್ ರಹಿತವಾಗಿ ಒಂದು ರೌಂಡ್ ಹಾಕಿದರೆ ದರೋಡೆ ಗ್ಯಾಂಗನ್ನು ಪತ್ತೆಹಚ್ಚಬಹುದೆನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ರಾತ್ರಿ ಹತ್ತೂವರೆ ಒಳಗೆಯೇ ಈ ಕೃತ್ಯ ನಡೆಯುವುದರಿಂದ ಸ್ಥಳೀಯ ಕೆಲ ಉಂಡಾಡಿಗುಂಡರೇ ಈ ಸಾಹಸಕ್ಕಿಳಿದಿರಬಹುದೆಂದು ಹೇಳಲಾಗುತ್ತಿದೆ. ಪೊಲೀಸರು ಚುರುಕಾಗದಿದ್ದರೆ ದೊಡ್ಡ ಕ್ರೈಮ್ ನಡೆಯುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ರಾತ್ರಿ ಸವಾರರಿಗೆ ಈ ರಸ್ತೆ ಡೇಂಜರ್ ಎನ್ನುವಂತಾಗಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಅಪರಿಚಿತ ಗ್ಯಾಂಗ್‌ನ್ನು ಹೆಡೆಮುರಿ ಕಟ್ಟಬೇಕಾಗಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!