ಕಷ್ಟಪಟ್ಟು ಖರೀದಿಸಿದ ಜಾಗವನ್ನು ದೇವಾಲಯಕ್ಕೆ ನೀಡಲು ನಿರಾಕರಣೆ:  ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ
ಕಷ್ಟಪಟ್ಟು ಖರೀದಿಸಿದ ಜಾಗವನ್ನು ದೇವಾಲಯಕ್ಕೆ ನೀಡಲು ನಿರಾಕರಣೆ: ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ

ದೇವಸ್ಥಾನಕ್ಕೆ ಉಚಿತವಾಗಿ ಜಾಗ ನೀಡಿಲ್ಲ ಎಂಬ ಕಾರಣಕ್ಕೆ ಊರವರು ಕುಟುಂಬವೊಂದನ್ನು ಕಳೆದ ಐದು ವರ್ಷದ ಹಿಂದೆ ಬಹಿಷ್ಕರಿಸಿರುವ ಗಂಭೀರ ಆರೋಪ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಸಮೀಪದ ನೀರಲಗಿ ಗ್ರಾಮದಲ್ಲಿ ಕೇಳಿಬಂದಿದೆ.

ನೀರಲಗಿಯ ಯಲ್ಲಾರಿ ಮಜನಪ್ಪ ಕದಂ ಕುಟುಂಬದವರು ತಮ್ಮ ಒಂದು ಎಕರೆ ಜಮೀನನ್ನು ಸ್ಥಳೀಯ ದೇವಸ್ಥಾನಕ್ಕೆ ದಾನ ನೀಡಲು ನಿರಾಕರಿಸಿದ್ದಕ್ಕೆ ಈ ರೀತಿ ಬಹಿಷ್ಕಾರ ಹಾಕಿರುವುದಾಗಿ ಆರೋಪ ಮಾಡಿದ್ದಾರೆ.

ಅಲ್ಲದೆ ಕಳೆದ ಐದು ವರ್ಷಗಳಿಂದ ಯಾರೇ ಅವರ ಸಂಪರ್ಕಕ್ಕೆ ಬಂದರು ಅವರನ್ನೂ ಕೂಡ ಟಾರ್ಗೆಟ್ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.

ಯಲ್ಲಾರಿ ಮಜನಪ್ಪ ಕದಂ ಅವರು ತಾವು ದುಡಿದ ಹಣದಲ್ಲಿ 2012ರಲ್ಲಿ 16 ಸಾವಿರ ರೂಪಾಯಿ ಕೊಟ್ಟು ಒಂದು ಎಕರೆ ಜಮೀನು ಖರೀದಿಸಿದ್ದರಂತೆ. ತಮ್ಮ ಕುಟುಂಬಕ್ಕೆ ಆಧಾರವಾಗುವ ಆಶಾಭಾವನೆಯೊಂದಿಗೆ ಈ ಜಮೀನಿನಲ್ಲಿ ಮಾವಿನ ಗಿಡಗಳನ್ನು ಬೆಳೆಸಿದ್ದಾರೆ. ಆದರೆ 2017ರಲ್ಲಿ ಗ್ರಾಮದಲ್ಲಿರುವ ಹಿರಿಯರು ಸ್ಥಳೀಯ ದೇವಸ್ಥಾನಕ್ಕೆ ಜಮೀನು ನೀಡುವಂತೆ ಹೇಳಿದ್ದರು. ಆದರೆ ತಮಗೆ ಜೀವನಾಧಾರಕ್ಕೆ ಇರುವ ಜಮೀನು ಎಂದು ನಿರಾಕರಿಸಿದ್ದರು. ಆದರೆ ದೇವಸ್ಥಾನದ ಆಡಳಿತ ಕಮಿಟಿಯವರು ವಾರ್ಷಿಕವಾಗಿ ದೇವಾಲಯದಿಂದ ಹೊರಡುವ ಕಾರ್ ಮೆರವಣಿಗೆಯು ಇದೇ ಹಾದಿಯಲ್ಲಿ ಇರುವ ಜಮೀನಿನನಲ್ಲಿ ಸಾಗುತ್ತದೆ. ಹೀಗಾಗಿ ಭೂಮಿಯನ್ನು ಉಚಿತವಾಗಿ ನೀಡಲು ಹೇಳುತ್ತಿದ್ದಾರೆ ಎಂದು ಕದಂ ತಿಳಿಸಿದ್ದಾರೆ.

ಇನ್ನು ಈ ಸಂಬಂಧ ಪಂಚಾಯಿತಿ ಕೂಡ ಮಾಡಲಾಗಿದೆ. ಪಂಚರು ಒತ್ತಡ ಹೇರಲು ಆರಂಭಿಸಿದ್ದರು. ಆದರೂ ನಾವು ಭೂಮಿ ನೀಡಲು ಒಪ್ಪದೆ ಇದ್ದಾಗ ತಮ್ಮ ಹಾಗೂ ಪತ್ನಿ ಯಳವ್ವ ಮತ್ತು ಮಕ್ಕಳಾದ ಮಹೇಶ್ ಮತ್ತು ಮಂಜುನಾಥ್ ಅವರನ್ನು ಬಹಿಷ್ಕರಿಸಿದರು. ವಿಷಯ ಇಲ್ಲಿಗೆ ನಿಲ್ಲಲಿಲ್ಲ. ನಾವು ಪೊಲೀಸರಿಗೆ ಲಿಖಿತ ದೂರು ನೀಡಿದ್ದೇವೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ ಎಂದು ಕದಂ ಆರೋಪಿಸಿದ್ದಾರೆ.

ಇನ್ನು ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ ಅಥವಾ ನಮ್ಮನ್ನು ಭೇಟಿಯಾದ ಜನರನ್ನು ಸಹ ಬಹಿಷ್ಕರಿಸಲಾಗುತ್ತಿದೆ. ನಾವು ಶಾಸಕ ಆರ್‌ವಿ ದೇಶಪಾಂಡೆ ಮತ್ತು ಆಗಿನ ಎಂಎಲ್‌ಸಿ ಎಸ್‌ಎಲ್ ಘೋಟ್ನೇಕರ್ ಅವರನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿದ್ದೇವು. ಆದರೆ ಅವರು ಇದು ನಿಮ್ಮ ಹಳ್ಳಿಯ ವಿಷಯ ನೀವೆ ಬಗೆಹರಿಸಿಕೊಳ್ಳಿ ಎಂದು ಈ ವಿಷಯ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ.

ಸದ್ಯ ಬಹಿಷ್ಕಾರಗೊಂಡ ಕುಟುಂಬದವರಿಗೆ ಗ್ರಾಮದಲ್ಲಿ ಕಮ್ಮಾರರು ಮತ್ತು ಬಡಗಿಗಳ ಸೇವೆಯನ್ನು ಪಡೆಯುವುದನ್ನು ನಿಷೇಧಿಸಲಾಗಿದೆ. ಗ್ರಾಮದಲ್ಲಿ ದಿನಸಿ ಸಾಮಾನು ಕೊಳ್ಳಲು ಅವಕಾಶವಿಲ್ಲದೆ ಹಳಿಯಾಳಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಯಾರಾದರೂ ಸತ್ತರೆ, ನಮಗೆ ದಹನಕ್ಕೆ ಬಳಸುವ ವಾಹನ ಸಿಗುವುದಿಲ್ಲ. ಮಿರಾಶಿಗಳ (ಕುಣಬಿ ಸಮುದಾಯಕ್ಕೆ ಸೇರಿದ ಸ್ಥಳೀಯ ಅರ್ಚಕರ) ಸೇವೆಯನ್ನು ನಮಗೆ ನಿರಾಕರಿಸಲಾಗಿದೆ ಎಂದು ಬಹಿಷ್ಕಾರಕ್ಕೊಳಗಾದ ಕದಂ ಅವರ ಸಂಬಂಧಿ ಗಂಗವ್ವ ದೂರಿದ್ದಾರೆ.

ಇನ್ನು ಬಗ್ಗೆ ಜಿಲ್ಲಾಧಿಕಾರಿ ಮಾತನಾಡಿದ್ದು ವಿಷಯ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!