ಮಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ.! ಬಾಲಕನಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ
ಸಾರ್ವಜನಿಕರ ಸಮ್ಮುಖದಲ್ಲಿ ಬಾಲಕನಿಗೆ ಥಳಿಸಿದ ಬುರ್ಖಾಧಾರಿ ಮಹಿಳೆ ಮತ್ತು ಯುವಕ

ಮಂಗಳೂರು: ಶಾಲಾ ಬಾಲಕನ ಮೇಲೆ ಬಸ್ ನಿಲ್ದಾಣದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಬುರ್ಖಾಧಾರಿ ಮಹಿಳೆ ಹಾಗೂ ಯುವಕನೋರ್ವ ಮನಬಂದಂತೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡುತ್ತಿರುವುದೇಕೆ ಎನ್ನುವುದು ಬಯಲಾಗಿಲ್ಲ.

ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸದಿದ್ದಲ್ಲಿ ನೈತಿಕ ಪೊಲೀಸ್ ಗಿರಿ ನಿಯಂತ್ರಿಸುವುದು ಕಷ್ಟ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಂಗಳೂರು ಹೊರವಲಯದ ಅಡ್ಯಾರ್ ಕಟ್ಟೆ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು ಮಧ್ಯವಯಸ್ಕ ಬುರ್ಖಾಧಾರಿ ಮಹಿಳೆ ಹಾಗೂ ಯುವಕ ಫಾರ್ಚುನರ್ ಕಾರ್ ನಲ್ಲಿ ಬಂದು ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಯುವಕ ಸ್ಥಳೀಯವಾಗಿ ಗಾಂಜಾ ಗ್ಯಾಂಗ್ ನಲ್ಲಿ ಸಕ್ರಿಯವಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವೈರಲ್ ವಿಡಿಯೋ ಹಿನ್ನೆಲೆಯೇನು ಎನ್ನುವುದು ಪೊಲೀಸ್ ತನಿಖೆಯಿಂದ ಬಯಲಾಗಬೇಕಿದೆ. ಬಾಲಕ ಯಾವ ತಪ್ಪೇ ಮಾಡಿರಲಿ, ಆದರೆ ಸಾರ್ವಜನಿಕವಾಗಿ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಪೊಲೀಸರು ಆದಷ್ಟು ಬೇಗನೆ ಕಠಿಣ ಕ್ರಮ ಜರುಗಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಸಂಘಟನಾ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ ಆಗ್ರಹಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!