ಸುಳ್ಯ: ಮತ್ತೆ ನಕ್ಸಲ್‌ ಸಂಚಾರ - ಎಎನ್‌ಎಫ್‌ನಿಂದ ಶೋಧಕಾರ್ಯ.!!
ಗಡಿಭಾಗ ಕೂಜಿಮಲೆ ಎಸ್ಟೇಟ್‌ ಬಳಿ ನಕ್ಸಲರ ಪ್ರತ್ಯಕ್ಷ
ಕಾರ್ಯಾಚರಣೆ ತೀವ್ರ

ಸುಳ್ಯ : ದಕ್ಷಿಣ ಕನ್ನಡ ಕೊಡಗು ಗಡಿ ಭಾಗ ಸುಳ್ಯ ತಾಲೂಕಿನ ಗಡಿ ಗ್ರಾಮ ಕಲ್ಮಕಾರು ಸಮೀಪದ ಕೂಜಿಮಲೆ ಎಸ್ಟೇಟ್‌ ಬಳಿ ಮತ್ತೊಮ್ಮೆ ನಕ್ಸಲರ ಚಲನವಲನ ಕಂಡು ಬಂದಿದ್ದು ಕೂಂಬಿಂಗ್ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಕೊಡಗು ಜಿಲ್ಲೆಯ ವ್ಯಾಪ್ತಿಗೆ ಸೇರುವ ಈ ಕೂಜಿಮಲೆ ಎಸ್ಟೆಟ್ ಬಳಿ ಬುಧವಾರ ಅಪರಾಹ್ನ ಅಪರಿಚಿತ ಮಹಿಳೆ ಎಸ್ಟೇಟ್‌ನ ರಬ್ಬರ್‌ ತೋಟದಲ್ಲಿ ಸಂಚರಿಸುತ್ತಿರುವುದನ್ನು ಸಿಬಂದಿ ನೋಡಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್) ಆಗಮಿಸಿ ಶೋಧ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ.

ಶಂಕಿತ ಮಹಿಳೆ ರಬ್ಬರ್‌ ತೋಟದಿಂದ ಅರಣ್ಯ ಭಾಗದತ್ತ ತೆರಳಿದ್ದಾಳೆ ಎನ್ನಲಾಗಿದೆ. ನಕ್ಸಲ್‌ ನಿಗ್ರಹ ಪಡೆ ಐನೆಕಿದು, ಕೂಜಿಮಲೆ ಆಸುಪಾಸಿನಲ್ಲೇ ಶೋಧ ಕಾರ್ಯ ನಡೆಸುತ್ತಿದೆ ಎನ್ನಲಾಗಿದ್ದು, ಶಂಕಿತ ಮಹಿಳೆ ಕಾಣಿಸಿಕೊಂಡ ಮಾಹಿತಿ ಲಭ್ಯವಾದ ಕೂಡಲೇ ಎಎನ್‌ಎಫ್‌ ತಂಡ ಎಸ್ಟೇಟ್‌ ಪ್ರದೇಶಕ್ಕೆ ತೆರಳಿ ಶೋಧ ಕಾರ್ಯ ಆರಂಭಿಸಿದೆ.

ಮಾರ್ಚ್ 16ರಂದು ನಾಲ್ವರು ಶಂಕಿತ ನಕ್ಸಲರು ಕೂಜಿಮಲೆ ಎಸ್ಟೇಟ್‌ನ ಅಂಗಡಿಗೆ ಭೇಟಿ ನೀಡಿ ಸಾಮಗ್ರಿ ಖರೀದಿಸಿ ಅರಣ್ಯದತ್ತ ತೆರಳಿದ್ದರು. ಮಾ. 23ರಂದು ನಾಲ್ವರು ಶಂಕಿತರು ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಭೇಟಿ ನೀಡಿ ಊಟ, ಆಹಾರ ಸಾಮಗ್ರಿ ಪಡೆದುಕೊಂಡು ತೆರಳಿದ್ದರು. ಮಾ. 27ರಂದು ಮತ್ತೆ ಕೂಜಿಮಲೆ ಎಸ್ಟೇಟ್‌ ಪ್ರದೇಶದಲ್ಲಿ ಅಪರಿಚಿತ ಮಹಿಳೆ ಕಾಣಿಸಿಕೊಂಡಿದ್ದಾಳೆ. ಮಾ. 18ರಿಂದ ಈ ಭಾಗ ಸಹಿತ ವಿವಿಧೆಡೆ ನಕ್ಸಲ್‌ ನಿಗ್ರಹ ಪಡೆ ನಿರಂತರ ಶೋಧ ನಡೆಸುತ್ತಿದೆ ಆದ್ರೂ ನಕ್ಸಲರ ಯಾವುದೇ ಸುಳಿವು ದೊರಕಿಲ್ಲ ಎಂದು ಹೇಳಲಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!