ಸಿಸಿಬಿ ಭರ್ಜರಿ ಬೇಟೆ - 30.92 ಕೋಟಿ ಮುಖಬೆಲೆಯ ನಕಲಿ ನೋಟು ಜಪ್ತಿ.!!
ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ಮೌಲ್ಯದ ನೋಟುಗಳು ಪತ್ತೆ

ಬೆಂಗಳೂರಿನಲ್ಲಿ ಖಾಸಗಿ ಕಂಪನಿಗಳಿಂದ ನೀಡಬೇಕಾದ ಸಿಎಸ್‌ಆರ್‌ ಫಂಡ್ ಬ್ಲಾಕ್‌ ಮನಿಯನ್ನು ಖಾಸಗಿ ಟ್ರಸ್ಟ್‌ಗಳಿಗೆ ನೀಡುವುದಾಗಿ ವಂಚನೆ ಮಾಡುತ್ತಿದ್ದ 5 ಜನರ ಗ್ಯಾಂಗ್‌ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಕ್ಷಾಂತರ ಖಾಸಗಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ, ಸಾವಿರಾರು ಖಾಸಗಿ ಟ್ರಸ್ಟ್‌ಗಳು ಕೂಡ ಸೇವೆ ಸಲ್ಲಿಸುತ್ತಿವೆ. ಆದರೆ, ಇಲ್ಲೊಂದು ಗ್ಯಾಂಗ್‌ ಖಾಸಗಿ ಕಂಪನಿಗಳ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್‌ ಫಂಡ್) ಅನ್ನು ಸಂಕಷ್ಟದಲ್ಲಿರುವ ಟ್ರಸ್ಟ್‌ಗಳಿಗೆ ನೀಡುವುದಾಗಿ ಕೋಟಿ ಕೋಟಿ ರೂ. ವಂಚನೆ ಮಾಡುತ್ತಿದ್ದು, ಈಗ ಮಾಲ್ ಸಮೇತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದೆ. 

ಖಾಸಗಿ ಟ್ರಸ್ಟ್ ಗಳಿಗೆ CSR ಫಂಡ್ ನೀಡೋ ಹೆಸರಲ್ಲಿ ವಂಚಿಸ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ 30 ಕೋಟಿ 91 ಲಕ್ಷ 61 ಸಾವಿರಕ್ಕೂ (31,91,61,000 ರೂ.) ಅಧಿಕ ಮೌಲ್ಯದ ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ. ಇನ್ನು ಐವರು ಬಂಧಿತರು ಈ ಹಿಂದೆಯೂ ಇಂತಹದೇ ಸಾಮಾಜ ಬಾಹಿರ ಕುಕೃತ್ಯಗಳಾದ  ಗ್ಯಾಂಬ್ಲಿಂಗ್, ಹವಾಲಾ, ರೈಸ್ ಪುಲ್ಲಿಂಗ್ ಪ್ರಕರಣಗಳಲ್ಲಿ ಪಾಲ್ಗೊಂಡು ಜೈಲು ಪಾಲಾಗಿದ್ದರು. ಇನ್ನು ಜೈಲಿನಿಂದ ಹೊರಬಂದ ಗ್ಯಾಂಗ ಪುನಃ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳಿಗೆ ವಂಚಿಸಲು ಗ್ಯಾಂಗ್ ಕಟ್ಟಿಕೊಂಡಿದ್ದರು.

ಸಾರ್ವಜನಿಕರಿಗೆ ಹಾಗೂ ಟ್ರಸ್ಟ್ ಗಳಿಗೆ ನಮ್ಮ ಬಳಿ ನೂರಾರು ಕೋರಿ ರೂಪಾಯಿ ಬ್ಲಾಕ್ ಮನಿ ಇದೆ ಎನ್ನುತ್ತಿದ್ದ ಗ್ಯಾಂಗ್, ನೀವು ಟ್ರಸ್ಟ್‌ಗಳನ್ನು ಮಾಡಿದ್ದರೆ ನಿಮ್ಮ ಟ್ರಸ್ಟ್‌ಗಳಿಗೆ ಲಾಭಾಂಶವಿಲ್ಲದೇ ಹಣ ವರ್ಗಾಯಿಸೋದಾಗಿ ನಂಬಿಸುತ್ತಿದ್ದರು. ಆದರೆ, ನೀವು ಟ್ರಸ್ಟ್‌ಗಳಿಗೆ ಬರುವ ಹಣದಲ್ಲಿ ಶೇ.40 ಪರ್ಸೆಂಟ್ ಹಣವನ್ನು ಕೊಡಬೇಕು ಎಂದು ಹೇಳುತ್ತಿದ್ದರು. ಆದರೆ, ಶೇ.40 ಪರ್ಸೆಂಟ್ ಹಣವನ್ನು ನಗದು ರೂಪದಲ್ಲಿ ಮುಂಗಡವಾಗಿ ನೀಡಿದಲ್ಲಿ ನಿಮಗೆ ಕಂಪನಿಗಳಿಂದ ಶೇ.100 ಹಣ ನೀಡುವುದಾಗಿ ಹೇಳಿ ವಂಚನೆ ಮಾಡುತ್ತಿದ್ದರು.

ಇನ್ನು ಎಲ್ಲ ಟ್ರಸ್ಟ್‌ಗಳಿಗೂ ವಿಡಿಯೋ ಕಾಲ್ ಮಾಡುವ ಮೂಲಕ ತಮ್ಮ ಬಳಿಯಿರುವ ಖೋಟಾನೋಟಿನ ಕಂತೆ, ಕಂತೆ ಹಣವನ್ನ ತೋರಿಸಿ ನಂಬಿಸುತ್ತಿದ್ದರು. ವಂಚಕರ ಗ್ಯಾಂಗ್‌ನಲ್ಲಿ ಸುಧೀರ್, ವಿನಯ್, ಚಂದ್ರಶೇಖರ್, ಕಿಶೋರ್, ತೀರ್ಥ ರಿಷಿ ಸೇರಿ ಐವರನ್ನು ಸಿಸಿಬಿ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಎಲ್ಲರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿ ತಮ್ಮ ಇನ್ನಷ್ಟು ಕುಕೃತ್ಯಗಳ ಬಗ್ಗೆ ಬಾಯಿ ಬಿಡಿಸುತ್ತಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!