ಇಸ್ರೇಲ್‌ ವಾಯುದಾಳಿಗೆ ಹಮಾಸ್‌ ಮುಖ್ಯಸ್ಥನ 3 ಮಕ್ಕಳು, 4 ಮೊಮ್ಮಕ್ಕಳು ಬಲಿ.!!
Israel Airstrike: ಹಮಾಸ್ ಮುಖ್ಯಸ್ಥನ ಮೂವರು ಮಕ್ಕಳು, ಇಬ್ಬರು ಮೊಮ್ಮಕ್ಕಳು ಬಲಿ

2023ರ ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್‌ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಹಮಾಸ್‌ ಉಗ್ರರ ಅಡಗು ತಾಣವಾಗಿರುವ ಗಾಜಾ ನಗರದ ಮೇಲೆ ಇಸ್ರೇಲ್‌ ಸತತವಾಗಿ ದಾಳಿ ನಡೆಸಿ, ಉಗ್ರರನ್ನು ಸದೆಬಡಿಯುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಗಾಜಾ ನಗರದಲ್ಲಿ ಹಮಾಸ್‌ ಉಗ್ರ ಸಂಘಟನೆ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇಹ್‌ಗೆ ಸಂಬಂಧಿಸಿದ ಕಾರಿನ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಇಸ್ಮಾಯಿಲ್‌ ಹನಿಯೇಹ್‌ನ  ಮೂವರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು ಮೃತಪಟ್ಟಿದ್ದಾರೆ.

ಗಾಜಾ ನಗರದ ಅಲ್‌-ಶಾತಿ ಕ್ಯಾಂಪ್‌ ಬಳಿ ಇಸ್ಮಾಯಿಲ್‌ ಹನಿಯೇಹ್‌ ಕುಟುಂಬಸ್ಥರು ಕಾರಿನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಾರಿನ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ನಡೆಸಿದೆ. ದಾಳಿಯಲ್ಲಿ ಹಮಾಸ್‌ ಮುಖ್ಯಸ್ಥನ ಮಕ್ಕಳಾದ ಹಜೀಮ್‌, ಆಮಿರ್‌ ಹಾಗೂ ಮೊಹಮ್ಮದ್‌ ಎಂಬುವರು ಮೃತಪಟ್ಟಿದ್ದಾರೆ. ಇನ್ನು, ನಾಲ್ವರು ಮೊಮ್ಮಕ್ಕಳು ಕೂಡ ಇಸ್ರೇಲ್‌ ದಾಳಿಗೆ ಬಲಿಯಾಗಿದ್ದಾರೆ ಎಂದು ಪ್ಯಾಲೆಸ್ತೀನಿಯನ್‌ ಇಸ್ಲಾಮಿಸ್ಟ್‌ ಗ್ರೂಪ್‌ ಹಾಗೂ ಹಮಾಸ್‌ ಮುಖ್ಯಸ್ಥನ ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

“ನಮ್ಮ ಬೇಡಿಕೆಗಳು ಸ್ಪಷ್ಟ ಹಾಗೂ ನಿರ್ದಿಷ್ಟ ದೃಷ್ಟಿಕೋನವನ್ನು ಹೊಂದಿವೆ. ನನ್ನ ಮಕ್ಕಳು, ಕುಟುಂಬಸ್ಥರನ್ನು ಗುರಿಯಾಗಿಸಿ ದಾಳಿ ನಡೆಸಿದರೆ, ದ್ವೇಷವು ಹೆಚ್ಚುತ್ತದೆ. ಮಾತುಕತೆಯ ಕೊನೆಯ ಹಂತದಲ್ಲಿ ಪರಿಸ್ಥಿತಿಯು ಬಿಗಡಾಯಿಸುತ್ತದೆ. ಹಮಾಸ್‌ ಕೂಡ ದಿಟ್ಟ ಪ್ರತಿಕ್ರಿಯೆಗೆ ತನ್ನ ಪಟ್ಟುಗಳನ್ನು ಬದಲಿಸಬೇಕಾಗುತ್ತದೆ” ಎಂದು ಹಮಾಸ್‌ ಮುಖ್ಯಸ್ಥನು ಎಚ್ಚರಿಕೆ ನೀಡಿದ್ದಾನೆ. ಈಗಾಗಲೇ ಇಸ್ರೇಲ್‌ ಸೇನೆಯು ಜಾಗತಿಕ ವಿರೋಧವನ್ನೂ ಲೆಕ್ಕಿಸದೆ ಹಮಾಸ್‌ನ ಪ್ರಮುಖ ಉಗ್ರರನ್ನು ಹತ್ಯೆಗೈದಿದೆ. “ಗೆಲುವು ಸಾಧಿಸಿದ ಬಳಿಕವೇ ನಾವು ಯುದ್ಧ ನಿಲ್ಲಿಸುತ್ತೇವೆ” ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿ 1200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ. ಗಾಜಾ ನಗರದ ಮೇಲೆ ಇಸ್ರೇಲ್‌ ನಡೆಸುತ್ತಿರುವ ನಿರಂತರ ದಾಳಿಗಳಿಂದಾಗಿ ಸಾವಿರಾರು ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿವೆ.

ಇದಕ್ಕೂ ಮೊದಲು ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿತ್ತು. ಪ್ಯಾಲೆಸ್ತೀನ್‌ನ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್‌ ಆಕ್ರಮಣಕಾರಿ ನೀತಿಯನ್ನು ಖಂಡಿಸಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಈ ನಿರ್ಣಯದ ಪರವಾಗಿ ಭಾರತ ಮತದಾನ ಮಾಡಿರುವುದು ವಿಶೇಷವಾಗಿತ್ತು. ಇದಾದ ನಂತರ ಇಸ್ರೇಲ್‌ ವಿರುದ್ಧ ಮಂಡಿಸಿದ ನಿರ್ಣಯದ ಮತದಾನದಿಂದ ಭಾರತ ದೂರ ಉಳಿದಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!