ಮಂಗಳೂರು: ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಪೊಲೀಸ್‌ ಹುತಾತ್ಮರ ದಿನಾಚರಣೆ
ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಪೊಲೀಸ್‌ ಹುತಾತ್ಮರ ದಿನಾಚರಣೆ

ಮಂಗಳೂರು: ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ಹಾಗೂ ಕೆ.ಎಸ್‌.ಆರ್‌.ಪಿ. 7ನೇ ಪಡೆ, ಮಂಗಳೂರು ಘಟಕದ ಸಂಯುಕ್ತ ಆಶ್ರಯದಲ್ಲಿ ಇಂದು ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದಲ್ಲಿ ಪೊಲೀಸ್‌ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಷಿ ಅವರು ಮುಖ್ಯ ಅತಿಥಿಯಾಗಿ, ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಗೌರವ ಅತಿಥಿಯಾಗಿ ಆಗಮಿಸಿದ್ದರು.

 

ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಮುಖ್ಯ ಅತಿಥಿಗಳು, ವಿಶೇಷ ಆಹ್ವಾನಿತರು, ಹಿರಿಯ ಪೊಲೀಸ್‌ ಅಧಿಕಾರಿಗಳು ಮತ್ತು ಗಣ್ಯರು ಪುಷ್ಪಗುಚ್ಛ ಅರ್ಪಿಸಿ ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದರು. ಹುತಾತ್ಮರಾದ ಪೊಲೀಸರ ಸ್ಮರಣಾರ್ಥ ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.

ಹುತಾತ್ಮರಿಗೆ ನಮನ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಲಾಯಿತು. ವಿವಿಧ ಪೊಲೀಸ್‌ ತುಕಡಿಗಳಿಂದ ಕವಾಯತು ನಡೆಯಿತು.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ಅವರು ಪೊಲೀಸ್‌ ಹುತಾತ್ಮರ ದಿನಾಚರಣೆಯ ಮಹತ್ವವನ್ನು ವಿವರಿಸಿ ಈ ವರ್ಷ ಅಂದರೆ 2022 ಸೆ. 1 ರಿಂದ 2023 ಆ. 31 ರ ತನಕ ದೇಶದಲ್ಲಿ 189 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ 16 ಮಂದಿ ಪೊಲೀಸರು ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.

 

ಜಿಲ್ಲಾ ಎಸ್‌.ಪಿ. ರಿಷ್ಯಂತ್‌ ಸಿ.ಬಿ., ಕೆ.ಎಸ್‌.ಆರ್‌.ಪಿ. ಕಮಾಂಡೆಂಟ್‌ ಬಿ.ಎಂ. ಪ್ರಸಾದ್‌, ಮತ್ತು ಹಿರಿಯ ಪೊಲೀಸ್‌ ಅಧಿಕಾರಿಗಳು, ಕೋಸ್ಟ್‌ಗಾರ್ಡ್, ಹೋಂ ಗಾರ್ಡ್‌, ಅರಣ್ಯ ಇಲಾಖೆ, ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘ ಮತ್ತಿತರ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!