ಪಾಕಿಸ್ತಾನ ಮೇಲೆ ಕ್ಷಿಪಣಿ ಉಡಾಯಿಸಿದ ಇರಾನ್.!
ಇರಾನ್ ಕ್ಷಿಪಣಿ ದಾಳಿ - ಉಗ್ರರ ನೆಲೆ ಧ್ವಂಸ - ಎಚ್ಚರಿಕೆ ಕೊಟ್ಟ ಪಾಕಿಸ್ತಾನ

ಭಾರತದ ನಂತರ ಇದೀಗ ಇರಾನ್ ಕೂಡ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿದೆ. ಇರಾನ್ ಮಂಗಳವಾರ ಬಲೂಚಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಿತು ಮತ್ತು ಹಲವಾರು ಭಯೋತ್ಪಾದಕ ಗುಂಪುಗಳ ನೆಲೆಗಳನ್ನು ಧ್ವಂಸಗೊಳಿಸಿದೆ, ಇದು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ, ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಪಾಕಿಸ್ತಾನವು ಇರಾನ್‌ಗೆ ಬೆದರಿಕೆ ಹಾಕಿದೆ.

ಪಾಕಿಸ್ತಾನದೊಂದಿಗಿನ ಗಡಿ ಪ್ರದೇಶದಲ್ಲಿ ಇರಾನ್ ಭದ್ರತಾ ಪಡೆಗಳ ಮೇಲೆ ಜೈಶ್ ಉಲ್ ಅದಲ್ ಉಗ್ರ ಸಂಘಟನೆಯು ಇತ್ತೀಚೆಗೆ ಆಕ್ರಮಣ ನಡೆಸಿತ್ತು. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಕಾರ, ಬಲೂಚಿಸ್ತಾನ ಪ್ರಾಂತ್ಯದ ಜೈಶ್ ಉಲ್ ಅದಲ್ ಭಯೋತ್ಪಾದನಾ ಗುಂಪಿನ ಎರಡು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ.

"ಬಲೂಚಿಸ್ತಾನದ ಜೈಶ್ ಸಂಘಟನೆಯ ಎರಡು ಪ್ರಮುಖ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ಗಳಿಂದ ದಾಳಿ ನಡೆಸಿ ನಾಶಪಡಿಸಲಾಗಿದೆ" ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ತಿಳಿಸಿದೆ. ಆದರೆ ಈ ಬಗ್ಗೆ ಅದು ಹೆಚ್ಚಿನ ವಿವರ ನೀಡಿಲ್ಲ. ಉಗ್ರ ಸಂಘಟನೆಯ ಅತಿ ದೊಡ್ಡ ನೆಲೆಗಳಲ್ಲಿ ಒಂದಾದ ಕುಹೆ ಸಬ್ಜ್ ಪ್ರದೇಶವನ್ನು ಗುರಿಯಾಗಿಸಿ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ.

ಪಾಕಿಸ್ತಾನ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಇರುವ ನೆಲೆಗಳನ್ನು ಗುರಿಯಾಗಿಸಿ ಆಕ್ರಮಣ ಎಸಗಲಾಗಿದೆ ಎಂದು ಇರಾನ್‌ನ ಉನ್ನತ ಭದ್ರತಾ ಸಂಸ್ಥೆಯ ಮುಖವಾಣಿ ನೌರ್ ನ್ಯೂಸ್ ತಿಳಿಸಿದೆ. ಈ ಘಟನೆ ಪಾಕಿಸ್ತಾನವನ್ನು ಕೆರಳಿಸಿದೆ. ತನ್ನ ವಾಯು ಪ್ರದೇಶವನ್ನು ಅಪ್ರಚೋದಿತ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಪಾಕ್ ವಿದೇಶಾಂಗ ಸಚಿವಾಲಯ, ದಾಳಿಯನ್ನು ಇಸ್ಲಾಮಾಬಾದ್ ಪ್ರಬಲವಾಗಿ ಖಂಡಿಸುತ್ತದೆ ಎಂದಿದೆ.

ಇರಾನ್ ಜತೆ ಗಡಿ ಹಂಚಿಕೊಂಡಿರುವ ಬಲೂಚಿಸ್ತಾನ ಪ್ರಾಂತ್ಯದ ಮಾಹಿತಿ ಸಚಿವ ಜಾನ್ ಅಚಾಕ್‌ಝೈ, ಈ ದಾಳಿಯನ್ನು ಖಚಿತಪಡಿಸಲು ಹಾಗೂ ಅಲ್ಲಗಳೆಯಲು ಕೂಡ ನಿರಾಕರಿಸಿದ್ದಾರೆ. "ಐಎಸ್‌ಪಿಆರ್‌ನ ಪ್ರತಿಕ್ರಿಯೆಗೆ ಕಾಯಿರಿ" ಎಂದು ಪಾಕಿಸ್ತಾನ ಸೇನೆಯ ಸಾರ್ವಜನಿಕ ಸಂಪರ್ಕ ಘಟಕವನ್ನು ಉಲ್ಲೇಖಿಸಿ ಅವರು ಹೇಳಿದ್ದಾರೆ.ಇರಾನ್‌ನ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಇಬ್ಬರು ಅಮಾಯಕ ಮಕ್ಕಳು ಮೃತಪಟ್ಟಿದ್ದಾರೆ ಮತ್ತು ಮೂವರು ಹೆಣ್ಣುಮಕ್ಕಳು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಈ ಘಟನೆಯನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಎಂದಿರುವ ಅದು, ಗಂಭೀರ ಪರಿಣಾಮಗಳಿಗೆ ಎಡೆಮಾಡಿಕೊಡಲಿದೆ ಎಂದು ಇರಾನ್‌ಗೆ ಎಚ್ಚರಿಕೆ ನೀಡಿದೆ.

ಇರಾನ್ ದಾಳಿಯನ್ನು 'ಅಕ್ರಮ ಕೃತ್ಯ' ಎಂದು ಖಂಡಿಸಿರುವ ಪಾಕಿಸ್ತಾನ, ಟೆಹರಾನ್‌ನಲ್ಲಿ ಇರಾನಿಯನ್ ವಿದೇಶಾಂಗ ಸಚಿವಾಲಯದ ಎದುರು ತಮ್ಮ ಹಿರಿಯ ಅಧಿಕಾರಿ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದೆ. ಜತೆಗೆ ಘಟನೆಗೆ ಸಂಬಂಧಿಸಿದಂತೆ ಇರಾನ್‌ನ ಅಧಿಕಾರಿಗೆ ಸಮನ್ ನೀಡಿದೆ. "ಇದರ ಮುಂದಿನ ಪರಿಣಾಮಗಳ ಹೊಣೆಗಾರಿಕೆಯು ಇರಾನ್ ಮೇಲೆ ಇರಲಿದೆ" ಎಂದು ಪಾಕಿಸ್ತಾನ ಹೇಳಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!