ಸುರತ್ಕಲ್ ಅಂಡರ್ ಪಾಸ್ ನಲ್ಲೂ ಪ್ರವಾಹ!
ವಿದ್ಯಾರ್ಥಿಗಳ ಪೋಷಕರಿಗೆ ಕಾಡುತ್ತಿದೆ ಆತಂಕ...

ಸುರತ್ಕಲ್: ಇಲ್ಲಿನ ಹಿಂದೂ ವಿದ್ಯಾದಾಯಿನಿ ಶಾಲೆ ಮುಂಭಾಗದ ಹೆದ್ದಾರಿಯಲ್ಲಿನ ಅಂಡರ್ ಪಾಸ್ ಮಳೆಯ ನೀರಿನಿಮದ ಮುಳುಗಿದ್ದು, ಸಣ್ಣ ಅಂಡರ್ ಪಾಸ್ ನಲ್ಲೇ ದೊಡ್ಡ ಪ್ರವಾಹದ ಸ್ಥಿತಿ ತಲೆದೋರಿದೆ. ಇದರಿಂದ ಶಾಲಾ ಮಕ್ಕಳ ಪೋಷಕರು, ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ.

ಅಂಡರ್ ಪಾಸ್ ಅನ್ನು ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ ರಸ್ತೆ ದಾಟಲು ಸುಲಭವಾಗಲೆಂದು ನಿರ್ಮಿಸಲಾಗಿತ್ತು. ಆದರೆ ಇಲ್ಲಿ ಕೆಲವರು ಬಿಂದಾಸ್ ಆಗಿ ವೇಶ್ಯಾವಾಟಿಕೆ ಚಟುವಟಿಕೆ ನಡೆಸುತ್ತಿದ್ದು ಕೆಲವು ಲಾರಿ ಚಾಲಕರು ಅಕ್ರಮ ದಂಧೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಅಂಡರ್ಪಾಸ್ ಒಳಗಡೆ ಅಲ್ಲಲ್ಲಿ ಕಾಂಡೋಮ್ ಗಳು, ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಆನಂತರ ಅಂಡರ್ ಪಾಸನ್ನು ಮಕ್ಕಳ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದರು. ಈಗ ಮಳೆಗೆ ನೀರು ನಿಂತು ಅಪಾಯದ ಮುನ್ನೆಚ್ಚರಿಕೆ ಕೊಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಂಡಿಲ್ಲ.

ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಅಂಡರ್ ಪಾಸ್ ಮೂಲಕ ಹೋಗಬೇಕಿದೆ. ಆದರೆ ಕೆಲದಿನಗಳಿಂದ ಸುರಿದ ಮಳೆಗೆ ಅಂಡರ್ ಪಾಸ್ ದಾರಿಯಲ್ಲಿ ನೀರು ತುಂಬಿಕೊಂಡಿದ್ದು ಇನ್ನೊಂದು ಕಡೆಗೆ ದಾಟಲಾಗುತ್ತಿಲ್ಲ. ಮಕ್ಕಳಂತೂ ಇದರ ಒಳಗಡೆಯಿಂದ ಹೋಗಲು ಭಯಪಡುತ್ತಿದ್ದಾರೆ. ಒಳಗಡೆ ಪೂರ್ತಿ ಕತ್ತಲು ತುಂಬಿಕೊಂಡಿದೆ. ವಿದ್ಯುತ್ ಬೆಳಕಿನ ವ್ಯವಸ್ಥೆ ಕೂಡಾ ಇಲ್ಲ. ಒಂದು ವೇಳೆ ಸುಲಭದ ದಾರಿ ಎಂದು ರಸ್ತೆ ಮೇಲ್ಭಾಗದಿಂದ ದಾಟಿದರೆ ಅಪಾಯ ಗ್ಯಾರಂಟಿ. ಇನ್ನಾದರೂ ಅಧಿಕಾರಿಗಳು ಗಮನಹರಿಸಬೇಕು ಅನ್ನುತ್ತಾರೆ ಪೋಷಕರು.

ವಿದ್ಯಾರ್ಥಿನಿಯರ ಮಾನಭಂಗ ಯತ್ನವೂ ನಡೆದಿತ್ತು

ಅಂಡರ್ ಪಾಸ್ ನಲ್ಲಿ ಗಾಂಜಾ ಗಿರಾಕಿಗಳೇ ತುಂಬಿಕೊಂಡಿದ್ದು ಶಾಲಾ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ನಡೆದುಕೊಂಡ ಘಟನೆಗಳು ಜರುಗಿತ್ತು. ಹಿಂದೆ ಯುವಕನೋರ್ವ ಶಾಲಾ ಬಾಲಕಿಯ ಮಾನಭಂಗಕ್ಕೂ ಯತ್ನಿಸಿದ್ದ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆ ಬಳಿಕ ಅಂಡರ್ ಪಾಸ್ ನಲ್ಲಿ ಹೆಣ್ಮಕ್ಕಳು ಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲೂ ಹಗಲು ಹೊತ್ತು ಗಾಂಜಾ ಗಿರಾಕಿಗಳು, ಕುಡುಕರು ಅಂಡರ್ ಪಾಸ್ ನಲ್ಲಿ ಕಾಲ ಕಳೆಯುತ್ತಿದ್ದು ಆತಂಕ ವ್ಯಕ್ತವಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!