ಕನ್ನಡ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಉಚಿತ ವಿಮೆ
ಉಡುಪಿ ನಗರಸಭೆಯ ಸದಸ್ಯ ವಿಜಯ ಕೊಡವೂರು, ಕೊಡವೂರು ಗ್ರಾಮ ಮತ್ತು ಸುತ್ತಲಿನ 17 ಕನ್ನಡ ಮಾಧ್ಯಮ ಶಾಲೆಗಳ 1,256 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ಮಾಡಿದ್ದಾರೆ.

ಕನ್ನಡ ಶಾಲೆಯ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಉಚಿತ ವಿಮೆ

 

 ಮಂಗಳೂರು: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಉಡುಪಿಯ ನಗರಸಭಾ ಸದಸ್ಯ ಮತ್ತು ಸಮಾನಮನಸ್ಕ ಗೆಳೆಯರು ಸೇರಿ ಸುದ್ದಿ ಗದ್ದಲವಿಲ್ಲದೆ ಕಾರ್ಯಪ್ರವೃತ್ತರಾಗಿದ್ದು, 17ಕ್ಕೂ ಹೆಚ್ಚು ಕನ್ನಡ ಮಾಧ್ಯಮ ಶಾಲೆಗಳನ್ನು  ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಅಲ್ಲಿನ ವಿದ್ಯಾರ್ಥಿಗಳ ಆರೋಗ್ಯವನ್ನೂ ಕಾಪಾಡುತ್ತಿದ್ದಾರೆ.

 ಉಡುಪಿ ನಗರಸಭೆಯ ಸದಸ್ಯ ವಿಜಯ ಕೊಡವೂರು, ಕೊಡವೂರು ಗ್ರಾಮ ಮತ್ತು ಸುತ್ತಲಿನ 17 ಕನ್ನಡ ಮಾಧ್ಯಮ ಶಾಲೆಗಳ 1,256 ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ ಮಾಡಿದ್ದಾರೆ. ಇದಕ್ಕೆ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಸಹಕಾರ ನೀಡಿದೆ.

 ಎರಡು ವರ್ಷಗಳ ಹಿಂದೆ ಕೊಡವೂರು ಶಾಲೆಯ ವಿದ್ಯಾರ್ಥಿಗೆ ನಾಗರಹಾವು ಕಡಿದಿತ್ತು. ಮನೆಯಲ್ಲಿ ತೀರ ಬಡತನವಿದ್ದ ಕಾರಣ  ಆಸ್ಪತ್ರೆಯ 38 ಸಾವಿರ ರೂ. ಬಿಲ್ ಕಟ್ಟಲು ಪಡಬಾರದ ಕಷ್ಟಪಡಬೇಕಾಯಿತು. ಈ ಬಗ್ಗೆ ಮಾಹಿತಿ ತಿಳಿದ ವಿಜಯ ಕೊಡವೂರು, ತಮ್ಮ ವಾರ್ಡ್ ಅಭಿವೃದ್ಧಿ ಸಮಿತಿಯಲ್ಲಿ ಈ ವಿಷಯ ಚರ್ಚಿಸಿ, ತಮ್ಮ ಗ್ರಾಮದ ಎರಡು ಶಾಲೆಗಳ ವಿದ್ಯಾರ್ಥಿಗಳನ್ನು ವಿಮಾ ವ್ಯಾಪದ್ತಿಗೊಳಪಡಿಸಲು ನಿರ್ಧರಿಸಿದರು. ಅದಕ್ಕಾಗಿ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಸಂಪರ್ಕಿಸಿದರು. ದಾನಿಗಳ ನೆರವಿನಿಂದ ಕೊಡವೂರು ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಮೆ ಮಾಡಿಕೊಡಲಾಯಿತು.

 ಈ ವರ್ಷ ಯೋಜನೆಯನ್ನು ಸುತ್ತಮುತ್ತಲಿನ 15 ಶಾಲೆಗಳಿಗೆ ವಿಸ್ತರಿಸಲಾಗಿದೆ. ಶಾಲೆಗಳ ಹಳೇ ವಿದ್ಯಾರ್ಥಿ ಸಂಘ ಮತ್ತು ಊರಿನ ಇತರ ಸಂಘ ಸಂಸ್ಥೆಗಳ ಸಹಕಾರದಿಂದ ಸಾವಿರದಷ್ಟು ವಿದ್ಯಾರ್ಥಿಗಳನ್ನು ಈ ವರ್ಷ ಒಟ್ಟು 9.26 ಕೋಟಿ ರೂ. ಮೊತ್ತದ ವಿಮೆಗೊಳಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಪ್ರೀಮಿಯಂ ಅನ್ನು ದಾನಿಗಳಿಂದ ಭರಿಸಲಾಗಿದೆ.

 200ರಿಂದ 500 ರೂ.ಗಳವರೆಗೆ ಪ್ರೀಮಿಯಂ ಇದೆ. ಕೆಲವು ದಾನಿಗಳು 10-20 ವಿದ್ಯಾರ್ಥಿಗಳ ಪ್ರೀಮಿಯಂ ಕಟ್ಟಿ ಸಹಕಾರ ನೀಡಿದ್ದಾರೆ. ವಿದ್ಯಾರ್ಥಿಗಳು ಆಡುವಾಗ, ಮರದಿಂದ ಬಿದ್ದು, ಅಪಘಾತದಿಂದ ಗಾಯಗೊಂಡರೆ ಹೊರರೋಗಿಯಾಗಿ ಚಿಕಿತ್ಸೆ ಪಡೆದರೆ 2 ಸಾವಿರ ರೂ., ತೀವ್ರ ಗಾಯ, ಎಲುಬು ಮುರಿತದಿಂದ ಒಳರೋಗಿಯಾಗಿ ಸೇರಿದರೆ 25 ಸಾವಿರ ರೂ. ವೈದ್ಯಕೀಯ ವೆಚ್ಚ ವಿಮಾ ಸಂಸ್ಥೆ ಭರಿಸುತ್ತದೆ. ಈಗಾಗಲೇ ಅನಾರೋಗ್ಯ ಪೀಡಿತ ಕೆಲವು ಮಕ್ಕಳಿಗೆ ಈ ಯೋಜನೆಯ ಲಾಭ ದೊರಕಿದೆ.

 

 ಮುಂದಿನ ವರ್ಷ 50 ಶಾಲೆ

 ಇದೊಂದು ಆಂದೋಲನದಂತೆ ನಡೆಯಬೇಕು, ಕಳೆದ ವರ್ಷ ಎರಡು ಶಾಲೆಯಿಂದ ಈ ವರ್ಷ 17 ಶಾಲೆಯ ಮಕ್ಕಳಿಗೆ ವಿಮೆ ಮಾಡಿಕೊಡಲಾಗಿದೆ. ಮುಂದಿನ ವರ್ಷ 50 ಶಾಲೆಗೆ, ಮುಂದೆ ಇಡೀ ಜಿಲ್ಲೆಯ ಎಲ್ಲ ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಗಳಿಗೆ ವಿಸ್ತರಿಸಬೇಕು ಎಂಬ ಗುರಿ ಇದೆ. ಈ ಮೂಲಕ ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಗಳನ್ನು ಉಳಿಸುವುದಕ್ಕೆ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದು ವಿಜಯ ಕೊಡವೂರು ತಿಳಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!