ಲವ್ ಜಿಹಾದ್‌ಗೆ ತಿರುಗೇಟು...
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗು.

ಲವ್ ಜಿಹಾದ್‌ಗೆ ತಿರುಗೇಟು

 ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗು

 ಪುತ್ತೂರು: ಲವ್‌ಜಿಹಾದ್ ಹೆಸರಲ್ಲಿ ಹಿಂದು ಯುವತಿಯರಿಗೆ ಮೋಸ ಮಾಡುತ್ತಿರುವ ಮುಸ್ಲಿಂ ಯುವಕರನ್ನು ಅವರ ಸಮುದಾಯ ಹಸ್ತುಬಸ್ತಿನಲ್ಲಿಡಬೇಕು. ಇಲ್ಲವಾದರೆ ತಿರುಗೇಟು ನೀಡುವುದು ಅನಿವಾರ್ಯವಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.

 ಮತಾಂಧ ದುಷ್ಕರ್ಮಿಗಳಿಂದ ಇತ್ತೀಚೆಗೆ ಹತ್ಯೆಗೀಡಾಗಿರುವ ಬೆಳ್ಳಾರೆಯ ಯುವಕ ಪ್ರವೀಣ್ ನೆಟ್ಟಾರು ಮನೆಗೆ ಸೋಮವಾರ ಭೇಟಿ ನೀಡಲು ಆಗಮಿಸಿದ ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡದಿದ್ದರೆ ಮುಂದೆ ರಾಜ್ಯವ್ಯಾಪಿ ವ್ಯಾಪಕ ಆಂದೋಲನ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

 ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ. ದೇಶದಲ್ಲಿ ಸುಮಾರು 6400ರಷ್ಟು ಅನಧಿಕೃತ ಚರ್ಚ್‌ಗಳಿದ್ದು, ಅವುಗಳ ಮೂಲಕ ಬುಡಕಟ್ಟು ಜನಾಂಗದ, ದಲಿತರ, ಹಿಂದುಳಿದ ವರ್ಗಗಳ ಜನರ ಮತಾಂತರ ನಡೆಯುತ್ತಿದೆ. ಈ ಅನಧಿಕೃತ ಚರ್ಚ್‌ಗಳ ಧ್ವಂಸಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಚರ್ಚ್‌ಗಳ ಮೂಲಕ ಆಗುತ್ತಿರುವ ಮತಾಂತರವನ್ನು ಈ ಕಾಯ್ದೆ ಮೂಲಕ ತಡೆಯಬೇಕು ಎಂದು ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಆಗ್ರಹಿಸಿದರು.

 ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ವಿಭಾಗಾಧ್ಯಕ್ಷ ಮೋಹನ್ ಭಟ್, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಮುಖಂಡರಾದ ಧನ್ಯಕುಮಾರ್ ಬೆಳಂದೂರು ಹಾಜರಿದ್ದರು.

ಕ್ಯಾನ್ಸರ್ ಆಗಲಿದೆ ಪಿಎಫ್‌ಐ, ಎಸ್‌ಡಿಪಿಐ

 ಪಿಎಫ್‌ಐ ಮತ್ತು ಎಸ್‌ಡಿಪಿಐಯನ್ನು ರಾಜಕೀಯ ಲಾಭಕ್ಕೋಸ್ಕರ ಬಿಜೆಪಿ ಬೆಳೆಸುತ್ತಿದ್ದು, ಇದು ಮುಂದೊಂದು ದಿನ ಕ್ಯಾನ್ಸರ್ ಆಗಿ ಪರಿಣಮಿಸಿ ಆಪತ್ತು ತರುವುದು ಗ್ಯಾರಂಟಿ ಎಂದು ಎಚ್ಚರಿಸಿದ ಪ್ರಮೋದ್ ಮುತಾಲಿಕ್, ಹಿಂದು ಸಂಘಟನೆಗಳ ಬೆವರು-ಪರಿಶ್ರಮದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮುಂದಿನ ಆರು ತಿಂಗಳೊಳಗೆ ಹಂತಹಂತವಾಗಿ ಸುಧಾರಿಸಿಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಇಡೀ ಹಿಂದು ಸಮುದಾಯಕ್ಕೆ ಕಾದಿದೆ ಎಂದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಹಿಂದು ವಿರೋಧಿ ಮಾತ್ರವಲ್ಲದೆ ದೇಶ ವಿರೋಧಿಗಳಾಗಿವೆ. ದೇಶದ್ರೋಹಿಗಳನ್ನು ನಿರ್ಮಾಣ ಮಾಡುತ್ತಿರುವ ಕಾಂಗ್ರೆಸನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದರು.

 ಹಿಂದುತ್ವವೇ ನಮಗೆ ಮುಖ್ಯ

 ಪಕ್ಷ ಮತ್ತು ಹಿಂದುತ್ವದ ವಿಷಯ ಬಂದಾಗ ನಮಗೆ ಹಿಂದುತ್ವವೇ ಮುಖ್ಯ. ಹಿಂದುತ್ವ, ನಮ್ಮ ಸಂಸ್ಕೃತಿ ಉಳಿಯಬೇಕು. ಹಿಂದುತ್ವದ ಧ್ವನಿಯಾಗಿ ನಿಲ್ಲಲು ಮುಂದಿನ ಚುನಾವಣೆಯಲ್ಲಿ 25 ಸೀಟುಗಳನ್ನು ಹಿಂದು ಕಾರ್ಯಕರ್ತರು, ಹಿಂದು ಸಂಘಟನೆ ಮುಖಂಡರಿಗೆ, ಹಿಂದು ಸಮಾಜಕ್ಕಾಗಿ ಹೋರಾಟ ಮಾಡಿದವರಿಗೆ ನೀಡಬೇಕು. ಎಲ್ಲಿ ಬೇಕಾದರೂ ಆಗಬಹುದು ಎಂದು ಹೇಳಿದ ಮುತಾಲಿಕ್, ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

 ಪ್ರವೀಣ್ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ...

 ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮೀನಿನ ವ್ಯಾಪಾರ, ಅಡಕೆ ವ್ಯಾಪಾರದ ಲಾಭಿ ಇದೆ. ಹಿಂದು ಸಮುದಾಯ ಯಾವಾಗ ಹಲಾಲ್ ಮುಕ್ತ ಆಗಿ, ಮುಸ್ಲಿಂ ಸಮುದಾಯವರೊಟ್ಟಿಗೆ ವ್ಯಾಪಾರ ಮುಕ್ತವಾದರೆ ಮಾತ್ರ ಹಿಂದು ಸಮಾಜಕ್ಕೆ ಒಳಿತಾಗಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನ್ಯಾಯ ಸಿಗುವವರೆಗೆ ನಾವು ಬಿಡುವುದಿಲ್ಲ. ಅವರ ಬಲಿದಾನ ವ್ಯರ್ಥ ಮಾಡಲು ಬಿಡುವುದಿಲ್ಲ. ಕೊಲೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗುವವರೆಗೆ ನಾವು ವಿರಮಿಸುವುದಿಲ್ಲ ಎಂದರು. ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ತನ್ನ ಕಚೇರಿಯಲ್ಲಿ ಉದ್ಯೋಗ ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳ ಕ್ರಮ ಸ್ವಾಗತಾರ್ಹ. ಆದರೆ ತಕ್ಷಣ ಇದನ್ನು ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

 

 ಪ್ರವೀಣ್ ನೆಟ್ಟಾರು ಸಮಾಧಿಗೆ ನಮನ...

 ಸುಳ್ಯ: ಮತಾಂಧ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವಮೋರ್ಚಾ ಮುಖಂಡ, ಪರಿವಾರ ಸಂಘಟನೆಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮನೆಗೆ ಸೋಮವಾರ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು.

 ಸೋಮವಾರ ಮಧ್ಯಾಹ್ನ ವೇಳೆಗೆ ಪ್ರವೀಣ್ ಮನೆಗೆ ಆಗಮಿಸಿದ ಅವರು ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪ್ರವೀಣ್ ನೆಟ್ಟಾರು ಅವರ ತಂದೆ, ತಾಯಿ, ಪತ್ನಿ ಜತೆ ಮಾತುಕತೆ ನಡೆಸಿ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಪ್ರವೀಣ್ ನೆಟ್ಟಾರು ಅವರ ಸಮಾಧಿಗೆ ನಮನ ಸಲ್ಲಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಪ್ರಮೋದ್ ಮುತಾಲಿಕ್ ಪ್ರವೀಣ್ ಕುಟುಂಬ ಆ ಆಘಾತದಿಂದ ಇನ್ನೂ ಹೊರಬಂದಿಲ್ಲ. ಅವರ ಕುಟುಂಬಕ್ಕೆ ಸರ್ಕಾರ ನೀಡಿರುವ ಭರವಸೆಗಳನ್ನು ಶೀಘ್ರ ಈಡೇರಿಸಬೇಕು ಎಂದು ಮುಖ್ಯಮಂತ್ರಿಯನ್ನು ಒತ್ತಾಯಿಸುವುದಾಗಿ ತಿಳಿಸಿದರು. ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದೂ ಒತ್ತಾಯಿಸಿದರು. ಶ್ರೀರಾಮ ಸೇನೆಯ ಪ್ರಮುಖರು ಜತೆಯಲ್ಲಿದ್ದರು...


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!