ಸರಕಾರಿ ಕೆಲಸ ಕೊಡುವುದರಲ್ಲಿ ಹಿಂದಿಟು ಹಾಕುತ್ತಿರುವ ಸರ್ಕಾರದ ವಿರುದ್ಧ ಗರಂಆದ ಮುತಾಲಿಕ್
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮುತಾಲಿಕ್ ಎಚ್ಚರಿಕೆ...

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದು ಸಂಘಟನೆಯ ಮುಖಂಡ ಪ್ರವೀಣ್ ನೆಟ್ಟಾರು ಮನೆಯವರಿಗೆ ಸರ್ಕಾರದ ವತಿಯಿಂದ ನೀಡಲಾದ ಭರವಸೆ ಈಡೇರಿಸದಿದ್ದರೆ ಸಿಎಂ ಮನೆಯ ಮುಂದೆಯೇ ಸಾವಿರಾರು ಜನರನ್ನು ಸೇರಿಸಿ ಧರಣಿ ಮಾಡಬೇಕಾಗುತ್ತದೆ. ಸಿಎಂ ಮುಖಕ್ಕೂ ಮಸಿ ಬಳಿಯಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

 ಪ್ರವೀಣ್ ನೆಟ್ಟಾರು ಮನೆಗೆ ಸೋಮವಾರ ಸಂಜೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಮುಖ್ಯಮಂತ್ರಿ ಕಚೇರಿಯಲ್ಲಿ ಪ್ರವೀಣ್ ಪತ್ನಿಗೆ ಕೆಲಸ ಕೊಡುವುದಾಗಿ ಸಿಎಂ ಘೋಷಿಸಿದ್ದು, ಅದರಂತೆ ಮಾತಿನಂತೆ ನಡೆದುಕೊಂಡು ಕೆಲಸ ಕೊಡಬೇಕು. ಈ ಹಿಂದೆಯೂ ಇದೇ ರೀತಿಯ ಆಶ್ವಾಸನೆ ನೀಡಿ ಈಡೇರಿಸಿಲ್ಲ. ಪರೇಶ್ ಮೇಸ್ತಾ, ಶರತ್ ಮಡಿವಾಳ ಅವರ ಹತ್ಯೆಯ ಸಂದರ್ಭದಲ್ಲಿ ಮಾಡಿರುವ ಘೋಷಣೆ ಜಾರಿಗೆ ಬಂದಿಲ್ಲ ಎಂದು ನೆನಪಿಸಿದರು. ಪ್ರವೀಣ್ ಪ್ರಕರಣದಲ್ಲೂ ಹಾಗೆಯೇ ಮಾಡಿದರೆ, ಮುಖ್ಯಮಂತ್ರಿಗಳು ಮಾತು ತಪ್ಪಿದರೆ ನಿಮ್ಮ ಮನೆ ಮುಂದೆ ಸಾವಿರಾರು ಜನ ಸೇರಿಸಿ ಧರಣಿ ಕೂತು, ನಿಮ್ಮ ಮುಖಕ್ಕೆ ಮಸಿ ಬಳಿಯಬೇಕಾದಿತು. ಈ ವಿಚಾರದಲ್ಲಿ ದ್ರೋಹ -ವಂಚನೆ ಮಾಡಬೇಡಿ ಎಂದು ಎಚ್ಚರಿಸಿದರು.

 ಪ್ರವೀಣ್ ಹತ್ಯೆಗೆ ಸಂಬಂಧಿಸಿ ಯಾವುದೇ ಮುಲಾಜಿಲ್ಲದೆ, ಯಾವುದೇ ಲೋಪಗಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಂಡು ಅಪರಾಧಿಗಳು ಹೊರಗೆ ಬಾರದಂತೆ ನೋಡಿಕೊಳ್ಳಬೇಕು. ಸರಿಯಾದ ಸಾಕ್ಷ್ಯಾಧಾರಗಳನ್ನು ಒಪ್ಪಿಸಿ, ಕೂಡಲೇ ನ್ಯಾಯಾಲಯ ಪ್ರಕ್ರಿಯೆ ನಡೆಸಿ ಒಂದು ವರ್ಷದೊಳಗಾಗಿ ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗುವಂತೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಆರೋಪಿಗಳಿಗೆ ಜಾಮೀನು ಕೊಟ್ಟರೆ ಹಿಂದು ಸಮಾಜ ಬಿಡುವುದಿಲ್ಲ ಎಂದು ಎಚ್ಚರಿಸಿದರು.

 ಶ್ರೀರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ ಶೆಟ್ಟಿ ಅಡ್ಯಾರು, ವಿಭಾಗಾಧ್ಯಕ್ಷ ಮೋಹನ್ ಭಟ್, ಮಂಗಳೂರು ಜಿಲ್ಲಾಧ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ರಾಮಣ್ಣ ಶೆಟ್ಟಿ ಕುಂದಾಪುರ, ಹಿಂದು ಸಂಘಟನೆಗಳ ಮುಖಂಡರಾದ ಕುಮಾರ್ ಮಾಲೆಮಾರ್, ಪ್ರಮೋದ್ ಉಚ್ಚಿಲ್, ಧನ್ಯಕುಮಾರ್ ಬೆಳಂದೂರು, ಚಂದ್ರಕಾಂತ್ ಶೆಟ್ಟಿ ಪಾಂಗಳ, ನವೀನ್‌ಕುಮಾರ್ ಕುಲಾಲ್ ಮತ್ತಿತರರು ಪ್ರಮೋದ್ ಮುತಾಲಿಕ್ ಅವರ ಜತೆಗಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!