ರಾಖಿ ಬಿಚ್ಚಿಸಿದ ಶಿಕ್ಷಕಿ, ವಾಪಸ್ ಕಟ್ಟಿಸಿದ ಹೆತ್ತವರು...
ಪಾಪೆಮಜಲು ಸರ್ಕಾರಿ ಶಾಲೆಯಲ್ಲಿ ಮಕ್ಕಳ ಕೈಯಿಂದ ರಕ್ಷಾಬಂಧನ ತೆಗೆಸಿದ್ದ ಹೆಚ್‌ಎಂ...

ಮಂಗಳೂರು: ರಕ್ಷಾಬಂಧನ ದಿನ ವಿದ್ಯಾರ್ಥಿಗಳು ಕಟ್ಟಿದ್ದ ರಕ್ಷಾಬಂಧನವನ್ನು ಶಾಲೆಯ ಮುಖ್ಯೋಪಾಧ್ಯಾಯರೇ  ಬಿಚ್ಚಿಸಿದ್ದಾರೆಂದು ಆರೋಪಿಸಿ ಮಕ್ಕಳ ಹೆತ್ತವರು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಸೋಮವಾರ ಶಾಲೆಗೆ ಬಂದು ಆಕ್ರೋಶ ವ್ಯಕ್ತಪಡಿಸಿ, ರಕ್ಷೆ ತೆಗೆಸಿದ್ದ ಶಿಕ್ಷಕಿಯ ಕೈಯಲ್ಲೇ ಮಕ್ಕಳ ಕೈಗೆ ಮತ್ತೆ ರಕ್ಷೆ ಕಟ್ಟಿಸಿದ್ದಾರೆ.

 ಪುತ್ತೂರು ತಾಲೂಕಿನ ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಾಬಂಧನದ ದಿನ ಕಟ್ಟಿದ್ದ ರಾಖಿಯನ್ನು ಶಿಕ್ಷಕರು ಬಿಚ್ಚಿಸಿದ್ದರು. ಇದನ್ನು ಮನೆಯವರು ವಿಚಾರಿಸಿದಾಗ, ಶಾಲೆಯಲ್ಲಿ ಶಿಕ್ಷಕಿಯರು ಕೈಯಿಂದ ತೆಗೆಸಿರುವ ಬಗ್ಗೆ ಮಾಹಿತಿ ನೀಡಿದರು. ಈ ವಿಷಯದಿಂದ ಆಕ್ರೋಶಿತರಾದ ಕೆಲವು ಮಕ್ಕಳ ಹೆತ್ತವರು, ಶಾಲೆಗೆ ಆಗಮಿಸಿ ಶಿಕ್ಷಕರ ನಡೆಯನ್ನು ಪ್ರಶ್ನಿಸಿದರು. ಮುಖ್ಯಶಿಕ್ಷಕಿ ತೆರೇಸಾ ಎಂ.ಸಿಕ್ವೇರ ಈ ಬಗ್ಗೆ ಸ್ಪಷ್ಟನೆ ನೀಡಿ ಮಕ್ಕಳ ಕೈಯಲ್ಲಿದ್ದ ರಾಖಿ ಕಪ್ಪಾಗಿದ್ದರಿಂದ ಸಮಸ್ಯೆಯಾಗುತ್ತಿತ್ತು, ಅದನ್ನು ತೆಗೆಯಲು ವಿದ್ಯಾರ್ಥಿಗಳಲ್ಲಿ ತಿಳಿಸಿದ್ದು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಂದರು.

 ಎಚ್‌ಎಂ ಮಂಡಿಸಿದ ಈ ವಾದವನ್ನು ಮಕ್ಕಳ ಹೆತ್ತವರು ಒಪ್ಪಲಿಲ್ಲ. ಶಿಕ್ಷಕರು ಹೆದರಿಸಿದ್ದರಿಂದ ರಕ್ಷೆ ತೆಗೆದಿದ್ದೆವು ಎಂದು ಮಕ್ಕಳು ಹೇಳಿದ್ದಾರೆ. ರಕ್ಷಾಬಂಧನ ಆಚರಣೆಗೆ ಮಹತ್ವವಿದೆ. ಬೇರೆ ಕಡೆಯ ಶಾಲೆಯಲ್ಲಿ ಹೀಗೆ ರಕ್ಷಾಬಂಧನ ತೆಗೆಸಿಲ್ಲ. ಆದರೆ ಇಲ್ಲಿ ರಾಖಿ ಬಿಚ್ಚಿಸಿರುವುದು ಬೇಸರ ತಂದಿದೆ. ಮತ್ತೆ ಮಕ್ಕಳ ಕೈಗೆ ರಾಖಿ ಕಟ್ಟಬೇಕೆಂದು ಆಗ್ರಹಿಸಿ, ತಾವು ತಂದಿದ್ದ ರಕ್ಷೆಯನ್ನು ಶಿಕ್ಷಕಿಯ ಕೈಗೆ ನೀಡಿದರು. ಇದಕ್ಕೆ ಒಪ್ಪಿದ ಶಿಕ್ಷಕಿ, ಎಲ್ಲ ಮಕ್ಕಳಿಗೂ ರಾಖಿ ಕಟ್ಟಿದರು. ನಾರಾಯಣ ಚಾಕೋಟೆ, ಅಪ್ಪಯ್ಯ ನಾಯ್ಕ, ಬಾಲಕೃಷ್ಣ ಕಾವು, ಹರೀಶ್ ಪಾದಲಡಿ, ರಮೇಶ್ ನಿಧಿಮುಂಡ, ವಿಶಾಖ್ ರೈ ಸಸಿಹಿತ್ಲು ಮತ್ತಿತರರು ಹಾಜರಿದ್ದರು.

 

ಎಲ್ಲರ ಸಮ್ಮುಖದಲ್ಲೇ ಕ್ಷಮೆ ಕೇಳಿದ ಎಚ್‌ಎಂ

 ಘಟನೆಯ ಬಗ್ಗೆ ಮಾತನಾಡಿದ ಎಚ್‌ಎಂ ತೆರೇಸಾ ಎಂ.ಸಿಕ್ವೇರ, ‘ಗೊತ್ತಿಲ್ಲದೆ ಹೀಗೆ ಆಗಿದೆ. ಮಕ್ಕಳ ಹೆತ್ತವರು ಈ ಬಗ್ಗೆ ನೋವು ವ್ಯಕ್ತಪಡಿಸಿದ್ದಾರೆ. ಉದ್ದೇಶಪೂರ್ವಕ ಹೀಗೆ ಮಾಡ್ಲಿಲ. ಎಲ್ಲರ ಪರವಾಗಿ ನಾನೇ ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!