ಗಾವಸ್ಕರ್ ಅಜೇಯ ಮೂವತ್ತಾರೂ... ಯುವರಾಜ್ ಸಿಂಗ್‌ನ ಆರು ಸಿಕ್ಸರ್
ಭಾರತ -ಇಂಗ್ಲೆಂಡ್ ವಿಶ್ವಕಪ್ ಪಂದ್ಯಗಳತ್ತ ಒಂದು ಹಿನ್ನೋಟ

ಏಕದಿನ ಕ್ರಿಕೆಟ್‌ನ ಮೊದಲ ಆವೃತ್ತಿಯಲ್ಲಿ 1975ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಭಾರತ -ಇಂಗ್ಲೆಂಡ್ ನಡುವಿನ ಲೀಗ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್ ಅತ್ಯಂತ ನಿಧಾನಗತಿಯಲ್ಲಿ (174 ಎಸೆತಗಳಲ್ಲಿ ಔಟಾಗದೆ 36 ರನ್) ಆಡಿದ್ದ ಅಂದಿನ ಆಟಕ್ಕೂ 2007ರಲ್ಲಿ ಉದ್ಘಾಟನಾ ಟಿ20 ವಿಶ್ವಕಪ್‌ನಲ್ಲಿ ಡರ್ಬಾನ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಬಾರಿಸಿದ ಜೋಶ್‌ನ ಆಟಕ್ಕೂ ಅಜಗಜಾಂತರ ವ್ಯತ್ಯಾಸವಿತ್ತು. 2011ರ ಏಕದಿನ ವಿಶ್ವಕಪ್‌ನ ಅತ್ಯಂತ ರೋಚಕ ಟೈ ಆದ ಪಂದ್ಯವೂ ನಮ್ಮ ಕಣ್ಣ ಮುಂದೆ ಸುಳಿಯುತ್ತದೆ. ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ನಾಳೆ ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಮುನ್ನ ಭಾರತ -ಇಂಗ್ಲೆಂಡ್ ನಡುವಿನ ವಿಶ್ವಕಪ್ಞ್ ಪ್ರಮುಖ ಪಂದ್ಯಗಳತ್ತ ಒಂದು ದೃಷ್ಟಿ ಹರಿಸೋಣ...

 

1983ರ ವಿಶ್ವಕಪ್ ಸೆಮಿಫೈನಲ್

ಮೈದಾನ: ಓಲ್ಡ್‌ಟ್ರಾಫರ್ಡ್, ಇಂಗ್ಲೆಂಡ್

ಫಲಿತಾಂಶ: ಭಾರತಕ್ಕೆ ಆರು ವಿಕೆಟ್ ಗೆಲುವು

ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳ ಪ್ರಾಬಲ್ಯದಿಂದಲೇ ಸುದ್ದಿಯಾಗುತ್ತಿದ್ದ ಕ್ರಿಕೆಟ್ ಜಗತ್ತಿಗೆ ಹೊಸ ದಿಕ್ಕು ತೋರಿಸಿದ್ದು 1983ರ ವಿಶ್ವಕಪ್ ಟೂರ್ನಿ. ಭಾರತ ಆ ಕಾಲದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಏಕದಿನ ಕ್ರಿಕೆಟ್‌ನ ಹೊಸ ಸಾಮ್ರಾಟ ಎನಿಸಿತು. ಅದಕ್ಕೂ ಮೊದಲು ಓಲ್ಡ್‌ಟ್ರಾಫರ್ಡ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಕಪಿಲ್‌ದೇವ್ ನೇತೃತ್ವದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿತ್ತು. ನಿಧಾನಗತಿಯ ಪಿಚ್‌ನಲ್ಲಿ ಭಾರತದ ಮಧ್ಯಮ ವೇಗದ ಬೌಲರ್‌ಗಳು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವನ್ನು 60 ಓವರ್‌ಗಳ ಆಟದಲ್ಲಿ 213 ರನ್‌ಗಳಿಗೆ ನಿಯಂತ್ರಿಸಿದರು. ಯಾನ್ ಬೋಥಮ್, ಬಾಬ್ ವಿಲ್ಲಿಸ್ ಮೊದಲಾದ ಫ್ರಂಟ್‌ಲೈನ್ ಬೌಲರ್‌ಗಳ ನೆರವಿನಿಂದ ಈ ಮೊತ್ತ ಉಳಿಸಿಕೊಳ್ಳುವ ವಿಶ್ವಾಸದಲ್ಲಿತ್ತು ಇಂಗ್ಲೆಂಡ್. ಆದರೆ ಭಾರತದ ಮೊಹಿಂದರ್ ಅಮರ್‌ನಾಥ್, ಸಂದೀಪ್ ಪಾಟೀಲ್ ಮತ್ತು ಯಶ್‌ಪಾಲ್ ಶರ್ಮ ಉತ್ತಮ ಆಟವಾಡಿ ಭಾರತವನ್ನು ಗೆಲುವಿನ ಗಡಿ ದಾಟಿಸಿದರು.

 

1987ರ ವಿಶ್ವಕಪ್ ಸೆಮಿಫೈನಲ್

ಮೈದಾನ: ಮುಂಬೈ

ಫಲಿತಾಂಶ: ಇಂಗ್ಲೆಂಡ್‌ಗೆ 35 ರನ್ ಜಯ

1983ರಲ್ಲಿ ವಿಶ್ವಕಪ್ ಜಯಿಸಿ ಅಭೂತಪೂರ್ವವಾದುದನ್ನು ಸಾಧಿಸಿದ್ದ ಕಪಿಲ್ ದೇವ್ ಬಳಗ 1987ರ ರಿಲಯನ್ಸ್ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಆದರೆ ಇಂಗ್ಲೆಂಡ್ ಭಾರತವನ್ನು ಸೆಮಿಪೈನಲ್‌ನಲ್ಲಿ ಮಣಿಸಿ 1983ರ ಸೋಲಿನ ಕಹಿ ಮರೆಯಿತು. ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ, ಆರಂಭಿಕ ಬ್ಯಾಟ್ಸ್‌ಮನ್ ಗ್ರಹಾಂ ಗೂಚ್ ಶತಕ (115 ರನ್, 136 ಎಸೆತ, 11 ಬೌಂಡರಿ) ನೆರವಿನಿಂದ 50 ಓವರ್‌ಗಳಲ್ಲಿ ಆರು ವಿಕೆಟ್‌ಗೆ 254 ರನ್ ಗಳಿಸಿತು. ಭಾರತದ ಬ್ಯಾಟಿಂಗ್ ಬಲಿಷ್ಠವಾಗಿದ್ದರೂ ಗುರಿ ಬೆನ್ನಟ್ಟುವಲ್ಲಿ ಎಡವಿದ ಭಾರತ 45.3 ಓವರ್‌ಗಳಲ್ಲಿ 219 ರನ್‌ಗೆ ಆಲೌಡಾಗಿ 35 ರನ್‌ಗಳ ಸೋಲು ಕಂಡಿತು. ಭಾರತದ ಪರ ಮೊಹಮ್ಮದ್ ಅಜರುದ್ದೀನ್ (64 ರನ್, 74 ಎಸೆತ, 7 ಬೌಂಡರಿ) ಪ್ರಯತ್ನ ಸಾಕಾಗಲಿಲ್ಲ.

 

1999ರ ವಿಶ್ವಕಪ್ ಗುಂಪಿನ ಪಂದ್ಯ

ಮೈದಾನ: ಎಜ್‌ಬಾಸ್ಟನ್

ಫಲಿತಾಂಶ: ಭಾರತಕ್ಕೆ 63 ರನ್ ಜಯ

1999ರ ವಿಶ್ವಕಪ್ ಭಾರತದ ಪಾಲಿಗೆ ನಿರಾಶಾದಾಯಕವಾಗಿದ್ದರೂ ಆ ಟೂರ್ನಿಯ ಗುಂಪಿನ ಹಂತದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 63 ರನ್‌ಗಳಿಂದ ಸೋಲಿಸಿತ್ತು. ನಿಧಾನಗತಿಯ ಎಜ್‌ಬಾಸ್ಟನ್‌ನ ಪಿಚ್‌ನಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ ಎಂಟು ವಿಕೆಟ್‌ಗೆ 232 ರನ್ ಕಲೆ ಹಾಕಿತ್ತು. ಭಾರತದ ಪರ ರಾಹುಲ್ ದ್ರಾವಿಡ್ ಸರ್ವಾಧಿಕ 53 ರನ್(82 ಎಸೆತ, 6 ಬೌಂಡರಿ), ಸೌರವ್ ಗಂಗೂಲಿ (40 ರನ್, 59 ಎಸೆತ, 6 ಬೌಂಡರಿ) ಮತ್ತು ಅಜಯ್ ಜಡೇಜ(39 ರನ್, 30 ಎಸೆತ, 5 ಬೌಂಡರಿ) ಉತ್ತಮ ಕೊಡುಗೆ ನೀಡಿದ್ದರು. ಈ ಮೊತ್ತ ಉಳಿಸಿಕೊಳ್ಳುವಲ್ಲಿ ಭಾರತದ ಬೌಲರ್‌ಗಳು ಜಾವಗಲ್ ಶ್ರೀನಾಥ್ 25/2, ದೇವಾಶಿಷ್ ಮೊಹಾಂತಿ 54/2, ಸೌರವ್ ಗಂಗೂಲಿ 27/3, ಅನಿಲ್ ಕುಂಬ್ಳೆ 30/2 ಉತ್ತಮ ನಿರ್ವಹಣೆ ತೋರಿಸಿ ತಂಡವನ್ನು ಗೆಲುವಿನ ಬಾಗಿಲು ದಾಟಿಸಿದರು.

 

2013ರ ಚಾಂಪಿಯನ್ಸ್ ಟ್ರೋಫಿ ಪೈನಲ್

ಮೈದಾನ: ಎಜ್‌ಬಾಸ್ಟನ್

ಫಲಿತಾಂಶ: ಭಾರತಕ್ಕೆ 5 ರನ್ ಜಯ

ಮಳೆಯಿಂದ ತೊಂದರೆಗೊಳಗಾದ 2013ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಐದು ರನ್‌ಗಳ ಅಂತರದಿಂದ ಸೋಲಿಸಿ ಟ್ರೋಫಿ ಜಯಿಸಿತು. ಬಹುತೇಕ ಇಂಗ್ಲೆಂಡ್ ತಂಡ ಗೆದ್ದೇಬಿಟ್ಟಿತು ಎಂಬ ಸ್ಥಿತಿಯಿಂದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅದ್ಭುತ ಗೆಲುವೊಂದನ್ನು ಭಾರತಕ್ಕೆ ತಂದುಕೊಟ್ಟಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 129 ರನ್ ಗಳಿಸಿತ್ತು. ಭಾರತದ ಪರ ವಿರಾಟ್ ಕೊಹ್ಲಿ 43 ರನ್(34 ಎಸೆತ, 4 ಬೌಂಡರಿ, 1 ಸಿಕ್ಸರ್), ರವೀಂದ್ರ ಜಡೇಜ ಅಜೇಯ 33 ರನ್(25 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಶಿಖರ್ ಧವನ್ 31 ರನ್(24 ಎಸೆತ, 2 ಬೌಂಡರಿ, 1 ಸಿಕ್ಸರ್) ಉತ್ತಮ ಕಾಣಿಕೆ ನೀಡಿದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಎಂಟು ವಿಕೆಟ್‌ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಇವೊಯಿನ್ ಮಾರ್ಗನ್(33) ಮತ್ತು ರವಿ ಬೊಪಾರ(30) ಭಾರತದ ಕೈಯಿಂದ ಗೆಲುವು ಕಸಿಯುವ ಹಂತದಲ್ಲಿದ್ದಾಗ ಒಂದು ಕಡೆ ದುಬಾರಿ ಆಗುತ್ತಿದ್ದ ಇಶಾಂತ್ ಶರ್ಮ ಅವರ ಮೇಲೆ ನಂಬಿಕೆ ಇಟ್ಟು ಅವರ ಕೈಗೇ ಓವರ್ ನೀಡಿದ ನಿರ್ಧಾರ ಹಲವರ ಹುಬ್ಬೇರಿಸಿದ್ದರೂ ಕೊನೆಗ ಧೋನಿ ಅವರ ಈ ನಿರ್ಧಾರವೇ ಭಾರತದ ಗೆಲುವಿಗೆ ಕಾರಣವಾಗಿತ್ತು.

 

 2007ರ ಟಿ 20 ವಿಶ್ವಕಪ್ ಲೀಗ್ ಪಂದ್ಯ

ಮೈದಾನ: ದರ್ಬಾನ್

ಫಲಿತಾಂಶ: ಭಾರತಕ್ಕೆ 18 ರನ್ ಜಯ

ಯಾರು ಯಾವ ಪಂದ್ಯವನ್ನು ಮರೆತರೂ ಇದೊಂದು ಪಂದ್ಯ ಮರೀಲಿಕ್ಕಿಲ್ಲ. ಅದು ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್ ಸಿಡಿಸಿದ ಪಂದ್ಯ. 2007ರ ಉದ್ಘಾಟನಾ ವಿಶ್ವಕಪ್ ಸಮರದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಎದುರಿಸಬೇಕಾಗಿ ಬಂತು. ಮೊದಲು ಬ್ಯಾಟಿಂಗ್ ಮಾಡಲಿಳಿದ ಭಾರತಕ್ಕೆ ಆರಂಭಿಕರಾದ ಗೌತಮ್ ಗಂಭೀರ್(58 ರನ್, 41 ಎಸೆತ, 7 ಬೌಂಢರಿ, 1 ಸಿಕ್ಸರ್) ಹಾಗೂ ವೀರೇಂದ್ರ ಸೆಹ್ವಾಗ್ (68 ರನ್, 52 ಎಸೆತ, 4 ಬೌಂಡರಿ, 3 ಸಿಕ್ಸರ್) 136 ರನ್‌ಗಳ ಮೊದಲ ವಿಕೆಟ್ ಜತೆಯಾಟ ಒದಗಿಸಿದರು. ಐದನೇ ಕ್ರಮಾಂಕದಲ್ಲಿ ಆಡಲಿಳಿದ ಯುವರಾಜ್ ಸಿಂಗ್ ಸ್ಟುವರ್ಟ್ ಬ್ರಾಡ್ ಎಸೆದ 19ನೇ ಓವರ್‌ನಲ್ಲಿ ಸತತ ಆರು ಸಿಕ್ಸರ್ ಸಿಡಿಸಿ ತಮ್ಮ ವೈಯಕ್ತಿಕ ಮೊತ್ತ 58 ರನ್‌ನಲ್ಲಿ ಏಳು ಸಿಕ್ಸರ್, 3 ಬೌಂಡರಿ ಸಿಡಿಸಿದ್ದರು. ಯುವರಾಜ್ ಸಿಂಗ ಅಬ್ಬರದ ಆಟದಿಂದ ಭಾರತ 20 ಓವರ್‌ಗಳ ಆಟದಲ್ಲಿ ನಾಲ್ಕು ವಿಕೆಟ್‌ಗೆ 218 ರನ್ ಕಲೆ ಹಾಕಿತು. ಪ್ರತಿಯಾಗಿ ಇಂಗ್ಲೆಂಡ್ ಆರು ವಿಕೆಟ್‌ಗೆ 200 ರನ್ ಗಳಿಸಿ ಸೋಲು ಒಪ್ಪಿಕೊಂಡಿತ್ತು.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!