"ಕಾಂತಾರ' ಮೋಡಿ ಬೆನ್ನಲ್ಲೇ "ಶಿವದೂತೆ ಗುಳಿಗೆ' ನಾಟಕಕ್ಕೆ ಬೇಡಿಕೆ.! ಬೇರೆ ಭಾಷೆಯಲ್ಲೂ ರೀಲಿಸ್‌ಗೆ ತಯಾರಿ.
"ಕಾಂತಾರ' ಅಬ್ಬರದ ಬೆನ್ನಿಗೆ "ಶಿವದೂತೆ ಗುಳಿಗೆ'

ಮಂಗಳೂರು: ತುಳುನಾಡಿನ ದೈವಗಳಾದ ಪಂಜುರ್ಲಿ, ಗುಳಿಗನ ಕಥೆಯಾಧಾರಿತ “ಕಾಂತಾರ’ ಸಿನೆಮಾ ದೇಶ-ವಿದೇಶದಲ್ಲಿ ಮೋಡಿ ಮಾಡಿ ಹಲವು ದಾಖಲೆಗಳನ್ನು ನಿರ್ಮಿಸುತ್ತಿರುವ ಬೆನ್ನಲ್ಲೇ ಕರಾವಳಿಯಾದ್ಯಂತ ತುಳು ರಂಗಭೂಮಿಯಲ್ಲಿ ಹೊಸ ಕ್ರಾಂತಿ ಬರೆದ “ಶಿವದೂತೆ ಗುಳಿಗೆ’ ತುಳು ನಾಟಕ ಇದೀಗ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಪ್ರದರ್ಶನಕ್ಕೆ ಬೇಡಿಕೆ ಬಂದಿದ್ದು, ಪ್ರದರ್ಶನಕ್ಕೆ ಅಣಿಯಾಗಿದೆ.

ಶಿವದೂತೆ ಗುಳಿಗೆ ನಾಟಕವು ಪೂರ್ಣ ಗುಳಿಗನ ಕಥೆಯಾಧಾರಿತವಾಗಿದೆ. ವಿಶೇಷವೆಂದರೆ, ಕಾಂತಾರದಲ್ಲಿ “ಗುರುವ’ನಾಗಿ ಮಿಂಚಿರುವ ಕಿರುತೆರೆ ನಟ ಸ್ವರಾಜ್‌ ಶೆಟ್ಟಿ ಅವರೇ ಶಿವದೂತೆ ಗುಳಿಗ ನಾಟಕದಲ್ಲಿ “ಗುಳಿಗ’ನಾಗಿ ಅಭಿನಯಿಸುತ್ತಿದ್ದಾರೆ. ಕಾಂತಾರ ಸಿನೆಮಾದಲ್ಲಿ ಗುಳಿಗನ ಅಬ್ಬರ ಕಂಡು ಕುತೂಹಲದಿಂದ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳ ಜನರು ಗುಳಿಗ ದೈವದ ವಿಶೇಷತೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಕರಾವಳಿಯಲ್ಲಿ ಗುಳಿಗನ ಮಹಿಮೆಯನ್ನು ಸಾರುವ ನಾಟಕ ಪ್ರದರ್ಶನವಾಗುತ್ತಿರುವ ಹಿನ್ನೆಲೆಯಲ್ಲಿ, ಅದನ್ನು ಬೆಂಗಳೂರು, ಹುಬ್ಬಳ್ಳಿ, ಧಾರವಾಡ ಸಹಿತ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರದರ್ಶನ ಮಾಡಲು ಆಹ್ವಾನ ಬಂದಿದೆ. ಇದರಂತೆ ತುಳುವಿನಲ್ಲಿರುವ ಶಿವದೂತೆ ಗುಳಿಗೆ ಕನ್ನಡದಲ್ಲಿಯೂ ಪ್ರದರ್ಶನಕ್ಕೆ ರೆಡಿಯಾಗುತ್ತಿದೆ. ಡಬ್ಬಿಂಗ್‌ ಕಾರ್ಯ ಸದ್ಯ ಪ್ರಗತಿಯಲ್ಲಿದೆ.

ಹಿಂದಿಯಲ್ಲಿಯೂ ಕಾಂತಾರ ಬಗ್ಗೆ ಕುತೂಹಲ ವ್ಯಕ್ತವಾದ ಹಿನ್ನೆಲೆಯಲ್ಲಿ ಗುಳಿಗ ನಾಟಕವನ್ನು ಹಿಂದಿಯಲ್ಲೂ ಪ್ರದರ್ಶಿಸುವಂತೆ ಬೇಡಿಕೆ ಬಂದಿದೆ. ಹೀಗಾಗಿ ಹಿಂದಿ ಅವತರಣಿಕೆಯಲ್ಲಿಯೂ ಗುಳಿಗನ ಕಥೆ ನಾಟಕದ ಸ್ವರೂಪದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಹಿಂದಿಯಲ್ಲಿ ಉತ್ತಮ ಫಲಿತಾಂಶ ದೊರೆತರೆ ಮಲಯಾಳ, ಗುಜರಾತಿ ಹಾಗೂ ಮರಾಠಿ ಭಾಷೆಯಲ್ಲಿಯೂ ಗುಳಿಗನ ನಾಟಕ ಪ್ರದರ್ಶನಕ್ಕೆ ನಿರ್ದೇಶಕ ವಿಜಯ್‌ ಕುಮಾರ್‌ ಕೊಡಿಯಾಲ್‌ಬೈಲು ಅವರು ಚಿಂತನೆ ನಡೆಸಿದ್ದಾರೆ. 2020ರ ಜ. 2ರಂದು ಮೊದಲ ಪ್ರದರ್ಶನ ಕಂಡ ತುಳುವಿನ “ಶಿವದೂತೆ ಗುಳಿಗೆ’ ಇದೀಗ 300ನೇ ಪ್ರದರ್ಶನವನ್ನು ದಾಟಿ ಮುನ್ನಡೆಯುತ್ತಿದೆ. ರಿಷಬ್‌ ಶೆಟ್ಟಿ ಅವರು ಕಾಂತಾರ ಸಿನೆಮಾ ಮಾಡುವ ಮುನ್ನ ಶಿವದೂತೆ ಗುಳಿಗ ನಾಟಕದ ಬಗ್ಗೆ ವಿವರವಾಗಿ ಅಭ್ಯಸಿಸಿ ಕೊಡಿಯಾಲ್‌ಬೈಲ್‌ ಅವರ ಜತೆಗೆ ಮಾತುಕತೆ ನಡೆಸಿದ್ದರು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!