ಮಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ – ಪಿಡಬ್ಲ್ಯೂ ಡಿ ಕಾರ್ಯಪಾಲಕ ಅಭಿಯಂತರರಿಗೆ ಮೂರು  ವರ್ಷ ಜೈಲು
ಆದಾಯಕ್ಕಿಂತ ಹೆಚ್ಚು ಆಸ್ತಿ ಪ್ರಕರಣ

 

ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿಂತೆ ಪಿಡಬ್ಲ್ಯೂ ಡಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಎನ್. ನರಸಿಂಹರಾಜು ಅವರಿಗೆ ಮೂರು ವರ್ಷ ಆರು ತಿಂಗಳ ಜೈಲು ಶಿಕ್ಷೆ ಹಾಗೂ 25 ಲಕ್ಷ ರೂ. ದಂಡ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ ಆರು ತಿಂಗಳ ಸಾದಾ ಸಜೆಗೆ ಆದೇಶಿಸಲಾಗಿದೆ.

ಬೆಂಗಳೂರು ಮೂಲದ ಎನ್. ನರಸಿಂಹರಾಜು ಅವರ ವಿರುದ್ದ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ 2010ರ ಮಾರ್ಚ್ 24‌ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಬಿ. ಜಕಾತಿ ಅವರು ಗುರುವಾರ ಅಂತಿಮ ತೀರ್ಪು ನೀಡಿದ್ದಾರೆ.

ಮಂಗಳೂರು ಪೊಲೀಸ್ ಉಪಾಧೀಕ್ಷಕ ಸದಾನಂದ ಎಂ. ವರ್ಣೇಕರ್‍ ಅವರು ನರಸಿಂಹರಾಜು ವಿರುದ್ದ ದೂರು ದಾಖಲಿಸಿದ್ದರು. ಪೊಲೀಸ್ ಉಪಾಧೀಕ್ಷಕ ವಿಠಲ್‌ದಾಸ್ ಪೈ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದಿಸಿದ್ದರು. ಇನ್ನು ಆರೋಪಿ ಎನ್. ನರಸಿಂಹರಾಜು ವಿರುದ್ದ 2009ರ ಸೆಪ್ಟಂಬರ್ 8ರಂದು ಟ್ರ್ಯಾಪ್ ಪ್ರಕರಣವೂ ದಾಖಲಾಗಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!