ಧರ್ಮಸ್ಥಳ, ಭಟ್ಕಳಕ್ಕೆ ಬಾಂಬ್‌ ಬ್ಲಾಸ್ಟ್‌ ಬೆದರಿಕೆ ಪತ್ರ
ಹೊಸ ವರ್ಷಕ್ಕೆ ಬಾಂಬ್‌ ಬ್ಲಾಸ್ಟ್‌ ಮಾಡುವುದಾಗಿ ಉಲ್ಲೇಖ

ಮಂಗಳೂರಿನಲ್ಲಿ ಶಂಕಿತ ಉಗ್ರ ಮಹಮ್ಮದ್‌ ಶಾರೀಕ್‌ ಕುಕ್ಕರ್‌ ಬಾಂಬ್‌ ಸ್ಪೋಟಿಸಿದ ಬೆನ್ನಲ್ಲೇ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ದಿನಾಚರಣೆ ವೇಳೆ ಬಾಂಬ್‌ ಬ್ಲಾಸ್ಟ್‌ ಘಟನೆಗಳು ನಡೆಯದಂತೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಆದರೂ, ಕಡಲ ತೀರದ ಪ್ರದೇಶ ಭಟ್ಕಳದಲ್ಲಿ ಹೊಸ ವರ್ಷದ ವೇಳೆ ಬಾಂಬ್ ಬ್ಲಾಸ್ಟ್ ಮಾಡುವ ಬೆದರಿಕೆಯ ಪತ್ರವೊಂದು ಬಂದಿದ್ದು, ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಡಿ.16-17ರ ಅಂದಾಜಿಗೆ ಭಟ್ಕಳ ಪೊಲೀಸ್‌ ಠಾಣೆಗೆ ಬಂದಿದ್ದ ಓಪನ್ ಕಾರ್ಡ್ ಲೆಟರ್ ಅನ್ನು ಪೊಲೀಸರು ತೆರೆದು ನೋಡಿದ್ದರು. ಪತ್ರದಲ್ಲಿ ಕ್ರಿಸ್‌ಮಸ್‌ ದಿನವಾದ ಡಿ.25ರಂದು ಭಟ್ಕಳದಲ್ಲಿ ಬ್ಲಾಸ್ಟ್ ಮಾಡುವುದಾಗಿ ಲೆಟರ್‌ನಲ್ಲಿ ಬರೆದಿತ್ತು. ಆದರೆ, ಆರೋಪಿ ಉರ್ದು ಹಾಗೂ ಇಂಗ್ಲೀಷ್‌ನಲ್ಲಿ ಎರಡೂ ಸೇರಿ ಅರ್ಧಂಬರ್ಧ ಭಾಷೆಯಲ್ಲಿ ಲೆಟರ್ ಬರೆದಿದ್ದನು. ರಾಜ್ಯದಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ಒಂದು ಪತ್ರ ಹಾಗೂ ಇನ್ನೊಂದು ಪತ್ರ ತಮಿಳುನಾಡಿನ ಪುಲಿಯಂತೋಪ್ ಕಮಿಷನರೇಟ್ ವ್ಯಾಪ್ತಿಗೆ ಪತ್ರ ರವಾನೆ ಆಗಿತ್ತು. ಮತ್ತೊಂದು ಪತ್ರ ಧರ್ಮಸ್ಥಳಕ್ಕೆ ಓಪನ್ ಕಾರ್ಡ್ ಲೆಟರ್ ಕಳುಹಿಸಿದ್ದನು.

ಚನ್ನೈ ಮೂಲದ ವ್ಯಕ್ತಿಯಿಂದ ಬ್ಲಾಸ್ಟ್‌ ಸಂಚು: ಪೊಲೀಸ್‌ ಠಾಣೆಗೆ ಬಾಂಬ್‌ ಬ್ಲಾಸ್ಟ್‌ ಪತ್ರವನ್ನು ಬರೆದಿದ್ದ ಆರೋಪಿಯನ್ನು ಚೆನ್ನೈ ಮೂಲದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆರೋಪಿ ಧರ್ಮಸ್ಥಳಕ್ಕೆ ಬರುವ ಮುನ್ನ ಸುಳ್ಯ, ಸುಬ್ರಹ್ಮಣ್ಯ ಪ್ರದೇಶದಲ್ಲೂ ತಿರುಗಾಡಿದ್ದನು. ಇನ್ನು ಲೆಟರ್ ಕಂಡ ಕೂಡಲೇ ಕಾರ್ಯಾಚರಣೆ ನಡೆಸಿದ್ದ ಭಟ್ಕಳ ಪೊಲೀಸರಿಗೆ, ಆರೋಪಿ ಸುಳ್ಯ ಮೂಲದ ತೇಜುಕುಮಾರ್ ಎಂಬವರ ದಾಖಲೆಗಳನ್ನು ಸಿಮ್ ಕಾರ್ಡ್ ಖರೀದಿಸಿರುವುದು ಪತ್ತೆಯಾಗಿದೆ. ತೇಜು ಕುಮಾರ್ ಅವರ ವಿಳಾಸ ಇರುವ ದಾಖಲೆ ಮತ್ತು ಆರೋಪಿಯ ಫೋಟೊ ಬಳಸಿ ಸಿಮ್ ಖರೀದಿ ಮಾಡಿದ್ದನು. ಈ ತೇಜುಕುಮಾರ್‌ ಸುಬ್ರಹ್ಮಣ್ಯದಲ್ಲಿ ರಿಕ್ಷಾ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. 

ಇನ್ನು ಬಾಂಬ್‌ ಬ್ಲಾಸ್ಟ್‌ ಆರೋಪಿಗಾಗಿ ಭಟ್ಕಳ ಹಾಗೂ ಚೆನ್ನೈ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ. ಈ ಹಿಂದೆ ಚೆನ್ನೈನ ಲ್ಯಾಪ್‌ಟಾಪ್ ರಿಪೇರಿ ಅಂಗಡಿಯೊಂದರಲ್ಲಿ ಆರೋಪಿ ತನ್ನ ಲ್ಯಾಪ್‌ಟಾಪ್ ನೀಡಿದ್ದನು. ಆದರೆ, ದುರಸ್ತಿ ಮಾಡುವ ಉದ್ದೇಶದಿಂದ ಅಂಗಡಿಯವ ಲ್ಯಾಪ್‌ಟಾಪ್‌ಗೆ ಪಾಸ್‌ವರ್ಡ್ ಹೇಳುವಂತೆ ಕೇಳಿದ್ದರೂ, ಅದನ್ನು ಹೇಳದೇ ಮುಚ್ಚಿಟ್ಟಿದ್ದನು. ಅಂಗಡಿಯವನಿಗೆ ಡೌಟ್ ಬಂದು ಪಾಸ್‌ವರ್ಡ್ ನೀಡದಿದ್ರೆ ಪೊಲೀಸರಿಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದ್ದನು. ಇದನ್ನು ಕೇಳಿ ಅಂಗಡಿಯವನಿಗೆ ಕೊಲೆ ಬೆದರಿಕೆ ಹಾಕಿ ಮಕ್ಕಳನ್ನು ಕಿಡ್ನ್ಯಾಪ್ ಮಾಡುವುದಾಗಿ ಬೆದರಿಸಿದ್ದನು. 

ದುರಸ್ತಿ ಅಂಗಡಿಯವನಿಂದ ತನ್ನ ಲ್ಯಾಪ್‌ಟಾಪ್ ವಾಪಾಸ್ ಪಡೆದಿದ್ದ ಆರೋಪಿ, ಪೊಲೀಸರು ತನಿಖೆ ಮಾಡುವಾಗ ಅಂಗಡಿಗೆ ನೀಡಿದ್ದ ನಂಬರ್ ಹಾಗೂ ಧರ್ಮಸ್ಥಳದಲ್ಲಿ ಕಾಣಿಸಿದ್ದ ನಂಬರ್ ಒಂದೇ ಆಗಿತ್ತು. ಈ ನಂಬರ್ ಆಧಾರದ ಮೇಲೆ ತನಿಖೆ ಮಾಡುವಾಗ ಸುಳ್ಳು ವಿಳಾಸ ನೀಡಿ ಖರೀದಿಸಿತ್ತು ತಿಳಿದುಬಂದಿತ್ತು. ತಂಡ ರಚಿಸಿ ಆರೋಪಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಟ್ಕಳ, ಮಂಗಳೂರು, ಉಡುಪಿ ಕಡಲ ತೀರ ಪ್ರದೇಶಗಳು ಸೇರಿ ವಿವಿಧ ಪ್ರದೇಶಗಳಲ್ಲಿ ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ದಿನಾಚರಣೆ ವೇಳೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!