ರಾಮೇಶ್ವರಂ ಕೆಫೆ ಸ್ಫೋಟ; ಆರೋಪಿ ಶಬ್ಬೀರ್ ಅರೆಸ್ಟ್.!!
ಎನ್‌ಐಎಯಿಂದ ಶಂಕಿತ ಬಾಂಬರ್​​​ನ ಸಹಚರ ಶಬ್ಬಿರ್ ಬಂಧನ

ಮಾರ್ಚ್‌ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಪ್ರಮುಖ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯುವ ಮೂಲಕ ಬಿಗ್‌ ಬ್ರೇಕ್‌ ಪಡೆದುಕೊಂಡಿದೆ. ಎನ್‌ಐಎ ತಂಡ ಬಳ್ಳಾರಿಯಲ್ಲಿ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಈತನಿಗೂ ಸ್ಪೋಟಕ್ಕೂ ಅತ್ಯಂತ ನಿಕಟವಾದ ಸಂಬಂಧ ಇರುವುದನ್ನು ಗುರುತಿಸಿದೆ.

ಎನ್‌ಐಎ ಪೊಲೀಸರು ಈಗ ವಶಕ್ಕೆ ಪಡೆದಿರುವುದು ಬಳ್ಳಾರಿಯ ಕೌಲ್‌ ಬಜಾರ್‌ ನಿವಾಸಿಯಾಗಿರುವ ಶಬ್ಬೀರ್‌ ಎಂಬಾತನನ್ನು. ಶಬ್ಬೀರ್‌ ಬಳ್ಳಾರಿ ಖಾಸಗಿ‌ ಕೈಗಾರಿಕೆಯಲ್ಲಿ ಎಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದಾನೆ. ಬುಧವಾರ ಬೆಳ್ಳಂಬೆಳಗ್ಗೆ ಎನ್‌ಐಎ ತಂಡ ಆತನನ್ನು ವಶಕ್ಕೆ ಪಡೆದಿದೆ. ಬಳ್ಳಾರಿಯ ಮೋತಿ ಸಮೀಪದ ಹೊಸ ಬಸ್ ನಿಲ್ದಾಣದ ದಾರಿಯಲ್ಲಿರುವ ಮನೆಯಿಂದ ಶಬ್ಬೀರ್‌ನನ್ನು ಎನ್‌ಐಎ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಾಗಿದ್ದರೆ ಶಬ್ಬೀರ್‌ನನ್ನು ಯಾಕೆ ವಶಕ್ಕೆ ಪಡೆಯಲಾಗಿದೆ. ಆತನಿಗೂ ರಾಮೇಶ್ವರಂ ಕೆಫೆಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಎನ್‌ಐಎ ಮೂಲಗಳು ಉತ್ತರ ನೀಡಿವೆ. ಮಾರ್ಚ್‌ 1ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಉಗ್ರ ಬೆಂಗಳೂರಿನಿಂದ ತಪ್ಪಿಸಿಕೊಂಡು ತುಮಕೂರು ಮೂಲಕ ಬಳ್ಳಾರಿಗೆ ಹೋಗಿದ್ದ ಎಂದು ಹೇಳಲಾಗಿದೆ. ಆ ಸಂದರ್ಭದಲ್ಲಿ ಕೌಲ್ ಬಜಾರ್ ನಿವಾಸಿ ಶಬ್ಬೀರ್‌ನನ್ನು ಭೇಟಿ ಮಾಡಿದ್ದ ಎಂದು ಹೇಳಲಾಗಿದೆ. ಶಂಕಿತ ಉಗ್ರ ಬಳ್ಳಾರಿಗೆ ಬಂದಿದ್ದಾಗ ಆತನಿಗೆ ಹೈದರಾಬಾದ್‌ಗೆ ಹೋಗಲು ಶಬ್ಬೀರ್‌ ಸಹಾಯ ಮಾಡಿದ್ದ ಎಂದು ಹೇಳಲಾಗಿದೆ. ಶಂಕಿತ ಉಗ್ರ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ಬೆಂಗಳೂರಿನಿಂದ ಬಳ್ಳಾರಿಗೆ ಹೋಗಿದ್ದ ಶಂಕಿತ ಉಗ್ರ

ಅಂದು ಮಾರ್ಚ್‌ 1ರಂದು ಬಾಂಬ್‌ ಸ್ಫೋಟದ ಬಳಿಕ ಬಳ್ಳಾರಿಯತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಮಾ.1ರಂದು ಮಧ್ಯಾಹ್ನ 11.55ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಫಿಕ್ಸ್ ಮಾಡಿದ್ದ, ಬಳಿಕ 12.55ಕ್ಕೆ ಬಾಂಬ್ ಸ್ಫೋಟ ಆಗುವಷ್ಟರಲ್ಲಿ ಮಾರತ್ ಹಳ್ಳಿ-ಸಿಲ್ಕ್ ಬೋರ್ಡ್- ಗೋರಗುಂಟೆಪಾಳ್ಯ ಮಾರ್ಗದಲ್ಲಿ ಪ್ರಯಾಣಿಸಿದ್ದ. ಮಧ್ಯಾಹ್ನ 1.30 ಸುಮಾರಿಗೆ ಗೊರಗುಂಟೇಪಾಳ್ಯದಲ್ಲಿ ಹುಮ್ನಾಬಾದ್ ಬಸ್ ಹತ್ತಿದ್ದ. ಸಂಜೆ ನಾಲ್ಕು ಗಂಟೆಯಷ್ಟರಲ್ಲಿ ಕಳ್ಳಂಬೆಳ್ಳ ಟೋಲ್‌ ಮೂಲಕ ಸಾಗಿ, ರಾತ್ರಿ 9 ಗಂಟೆ ಸುಮಾರಿಗೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಆರೋಪಿ ಕಾಣಿಸಿಕೊಂಡಿದ್ದ. ಹೀಗಾಗಿ ಆರೋಪಿಯ ಬೆನ್ನತ್ತಿ ಸಿಸಿಬಿ, ಎನ್ಐಎ ತಂಡಗಳು ಬಳ್ಳಾರಿಗೆ ತೆರಳಿದ್ದವು.

ಬಳ್ಳಾರಿ ಮಾಡಲ್ ಮಾದರಿಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ನಡೆದಿದೆ ಎಂಬ ಮಾಹಿತಿಯ ಆಧಾರದಲ್ಲಿ ಎನ್‌ಐಎ ತಂಡ ಬಳ್ಳಾರಿಯಲ್ಲಿ ಶಂಕಿತರ ಮನೆಗಳಲ್ಲಿ ಎನ್‌ಐಎ ತೀವ್ರ ಶೋಧ ನಡೆಸಿತ್ತು. ಈ ನಡುವೆ ಶಂಕಿತ ಉಗ್ರ ಮತ್ತು ಶಬ್ಬೀರ್‌ ನಡುವಿನ ಭೇಟಿಯ ಒಂದು ಸಣ್ಣ ಕ್ಲೂ ಸಿಕ್ಕಿತ್ತು. ಅದನ್ನು ಬೆನ್ನಟ್ಟಿ ಈಗ ಆತನನ್ನು ವಶಕ್ಕೆ ಪಡೆದಿದೆ.

ನಾಲ್ವರು ಶಂಕಿತರ ವಿಚಾರಣೆ

ಬಳ್ಳಾರಿಯಲ್ಲಿ ಹಳೆ ಕೇಸ್‌ಗಳಲ್ಲಿ ಬಂಧನವಾಗಿರುವ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸುತ್ತಿದೆ. ಜತೆಗೆ ನಾಪತ್ತೆಯಾಗಿರುವ ಆರೋಪಿಗಳ ಕುಟುಂಬಸ್ಥರನ್ನೂ ವಿಚಾರಣೆ ಮಾಡಲಾಗುತ್ತಿದೆ. ಬಳ್ಳಾರಿಯ ಶಂಕಿತ ಉಗ್ರ ಮಿನಾಜ್‌ ಅಲಿಯಸ್‌ ಸುಲೈಮಾನ್‌, ಸೈಯದ್‌ ಸಮೀರ್‌, ಮುಂಬೈನ ಅನಾಸ್‌ ಇಕ್ಬಾಲ್‌ ಶೇಖ್‌, ದೆಹಲಿಯ ಶಯಾನ್‌ ರೆಹಮಾನ್‌ ಅಲಿಯಾಸ್‌ ಹುಸೈನ್‌ನನ್ನು ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದು, ಎನ್‌ಐಎ ವಿಚಾರಣೆ ಮಾಡುತ್ತಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!