ಕೇರಳದ ಹೆಸರು ಬದಲಾವಣೆಗೆ ಮುಂದಾದ ಸರಕಾರ: ರಾಜ್ಯ ವಿಧಾನ ಸಭೆ ಒಪ್ಪಿಗೆ
ದೇವರ ನಾಡಿಗೆ ಹೊಸ ಹೆಸರು - ಇನ್ಮುಂದೆ ಕೇರಳ ಅಲ್ಲ "ಕೇರಳಂ"

ದೇವರ ನಾಡು, ಪ್ರವಾಸಿಗರ ತವರು ಕೇರಳ ಇನ್ಮುಂದೆ ಕೇರಳ ಅಲ್ಲ. ಹೊಸ ಹೆಸರಿಟ್ಟಿರೋ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಸಿಎಂ ಪಿಣರಾಯಿ ವಿಜಯನ್ ಕೇರಳ ರಾಜ್ಯಕ್ಕೆ ಕೇರಳಂ ಅನ್ನೋ ನಾಮಕರಣ ಮಾಡಿದ್ದು, ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡಿಸಿದ್ದಾರೆ. ಇನ್ಮುಂದೆ ದಾಖಲೆಗಳಲ್ಲಿ ಕೇರಳ ಅನ್ನೋದರ ಬದಲು ಕೇರಳಂ ಅಂತಾ ದಾಖಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೇರಳ ರಾಜ್ಯಕ್ಕೆ "ಕೇರಳಂ" ಎಂದು ಮರುನಾಮಕರಣ ಮಾಡುವಂತೆ ಕೇಂದ್ರ ಸರಕಾರವನ್ನು ಕೋರಿ ಸಿಎಂ ಪಿಣರಾಯಿ ವಿಜಯನ್ ಅವರು ಮಂಡಿಸಿದ ನಿರ್ಣಯಕ್ಕೆ ಕೇರಳ ವಿಧಾನ ಸಭೆ ಬುಧವಾರ ಸರ್ವಾನುಮತದ ಒಪ್ಪಿಗೆ ನೀಡಿದೆ.

ಕೇಂದ್ರ ಜಾರಿಗೆ ತರಲು ಮುಂದಾಗಿರುವ ಏಕರೂಪ ನಾಗರಿಕ ಸಂಹಿತೆ ವಿರುದ್ಧ ಕೇರಳ ವಿಧಾನ ಸಭೆ ಅವಿರೋಧವಾಗಿ ನಿರ್ಣಯ ಅಂಗೀಕರಿಸಿದ ಮರುದಿನವೇ ರಾಜ್ಯದ ಹೆಸರು ಬದಲಾವಣೆಗೆ ಮುಂದಾಗಿದೆ. ಸಂವಿಧಾನದ ಎಂಟನೇ ಪರಿಚ್ಛೇಧ ಸೇರಿದಂತೆ ಎಲ್ಲ ಭಾಷೆಗಳಲ್ಲಿ ರಾಜ್ಯದ ಹೆಸರನ್ನು “ಕೇರಳಂ ” ಎಂದು ಕೇಂದ್ರ ಸರಕಾರ ಬದಲಾಯಿಸಬೇಕು ಎನ್ನುವ ನಿರ್ಣಯವನ್ನು ಸಿಎಂ ಪಿಣರಾಯಿ ವಿಜಯನ್ ಮಂಡಿಸಿದರು. ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಮೈತ್ರಿಕೂಟ ಯುಡಿಎಫ್ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಇಲ್ಲದೇ ಒಪ್ಪಿಗೆ ಸೂಚಿಸಿತು. ಇದಾದ ನಂತರ ಸ್ಪೀಕರ್ ಎ.ಎನ್ .ಶಂಶೀರ್ ಅವರು ನಿರ್ಣಯ ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಘೋಷಿಸಿದರು.

“ಮಲಯಾಳಂ ಭಾಷೆಯಲ್ಲಿ  ರಾಜ್ಯದ ಹೆಸರು ಕೇರಳಂ. ಭಾಷಾವಾರು ಆಧಾರದ ಮೇಲೆ1956 ರ ನ. 1 ರಂದು ರಾಜ್ಯಗಳನ್ನು ಮರು ರಚಿಸಲಾದ ನಂತರವೂ ಬೇರೆ ಭಾಷೆಗಳಲ್ಲಿ ಕೇರಳ ಎಂದಿದೆ. ಮಲಾಯಾಳಂ ಮಾತನಾಡುವ ಜನರಿಗೆ “ಅಖಂಡ ಕೇರಳದ ಬಯಕೆ ಸ್ವಾತಂತ್ರ್ಯ ಚಳವಳಿಯ ದಿನಗಳಿಂದಲೂ ಇತ್ತು. ಸಂವಿಧಾನದ 3ನೇ ವಿಧಿಯಡಿ ಅದನ್ನು “ಕೇರಳಂ” ಎಂದು ಮರುನಾಮಕರಣ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ ” ಎಂದು ನಿರ್ಣಯವು ಹೇಳಿದೆ. ಸಂವಿಧಾನದ 3ನೇ ವಿಧಿಯು ಹೊಸ ರಾಜ್ಯಗಳ ರಚನೆ ಮತ್ತು ಪ್ರದೇಶಗಳು , ಗಡಿಗಳು ಅಥವಾ ಅಸ್ತಿತ್ವದಲ್ಲಿರುವ ರಾಜ್ಯಗಳ ಹೆಸರುಗಳ ಬದಲಾವಣೆಗೆ ಸಂಬಂಧಿಸಿದ್ದಾಗಿದೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!