ಕಂಬಳಕ್ಕೂ ಆಧುನಿಕತೆಯ ಸ್ಪರ್ಶ..! ಫಲಿತಾಂಶಕ್ಕೆ ಕಾಲಿಟ್ಟ ಆಪ್
ಕಂಬಳಕ್ಕೂ ಆಧುನಿಕತೆಯ ಸ್ಪರ್ಶ..! ಫಲಿತಾಂಶಕ್ಕೆ ಕಾಲಿಟ್ಟ ಆಪ್

ಕಾರ್ಕಳ: ದೇಸಿ ಆಟಗಳು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುತ್ತಿದೆ. ಅದಕ್ಕೆ ಈಗ ಕಂಬಳವೂ ಹೊರತಾಗಿಲ್ಲ. ಈ ನಿಟ್ಟಿನಲ್ಲಿ ಮಿಯಾರಿನಲ್ಲಿ ಇಂದು ಪ್ರಾಯೋಗಿಕವಾಗಿ ಒಂದು ಕಂಬಳ ನಡೆದಿದೆ. ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಒತ್ತು ನೀಡಿ ಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ ಆಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸುವ ಸಲುವಾಗಿ ಮಿಯಾರಿನಲ್ಲಿ ಇಂದು ಕಂಬಳ ಆಯೋಜನೆಯಾಗಿದೆ. 

ಬೆಳಗ್ಗೆ 10ರಿಂದ ಮಿಯಾರಿನಲ್ಲಿ ಈ ಪ್ರಾಯೋಗಿಕ ಕಂಬಳ ಏರ್ಪಡಿಸಲಾಗಿದೆ ಎಂದು ಉಭಯ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ| ಬೆಳಪು ದೇವಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ. ಕಂಬಳದಲ್ಲಿ ಸ್ಪಷ್ಟವಾದ ವೀಡಿಯೋ ಫಿನಿಷ್, ರೋಡ್ ವೇ ಸಿಸ್ಟಂ, ಲೇಸರ್ ತಂತ್ರಜ್ಞಾನ ಫಲಿತಾಂಶದಲ್ಲಿ ಪಾರದರ್ಶಕತೆ ತರುವಲ್ಲಿ ಯಶಸ್ವಿಯಾಗಿದೆ. 

ನೂತನ ಆಪ್ ಕಂಬಳ ಕೋಣಗಳ ಸರತಿ ಕ್ರಮಬದ್ಧವಾಗಿ ಜೋಡಿಸಲಿದೆ. ಇನ್ನೊಂದೆಡೆ ಕಂಬಳ ಕರೆಗೆ ಕೋಣಗಳನ್ನು ನಿಗದಿತ ಸಮಯಕ್ಕೆ ಇಳಿಸಲು ಅನುಕೂಲವಾಗುವಂತೆ ಸೈರನ್ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಅನಗತ್ಯ ವಿಳಂಬವಾದರೆ ಸೈರನ್ ಮೂಲಕ ಎಚ್ಚರಿಸಲಾಗುತ್ತದೆ. ಕೋಣಕ್ಕೆ ಸಮಯದ ಅವಕಾಶ ನೀಡಿ ಬಾರದ ಕೋಣಗಳಿಗೆ ವಾಕ್ ಓವರ್ ನೀಡುವ ಹೊಸ ನಿಯಮಗಳನ್ನು ಕಂಬಳಕ್ಕೆ ಅಳವಡಿಸಕೊಳ್ಳಲಾಗುತ್ತದೆ. ಇವೆಲ್ಲ ನಿಯಮಗಳ ಪರಿಶೀಲನೆ ಮಿಯಾರು ಕಂಬಳದಲ್ಲಿ ಆಗಲಿದೆ.

ಈ ಪ್ರಾಯೋಗಿಕ ಕಂಬಳ ಮಹತ್ವದ್ದಾಗಿದ್ದು ಕಂಬಳದ ಯಜಮಾನರು, ವ್ಯವಸ್ಥಾಪಕರು, ಕೋಣಗಳ ಯಜಮಾನರು, ತೀರ್ಪುಗಾರರು, ಕೋಣ ಓಡಿಸುವವರು, ಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಕಂಬಳ ಸಮಿತಿಯ ಮತ್ತು ಶಿಸ್ತು ಸಮಿತಿ ಹಾಗೂ ತೀರ್ಪುಗಾರರ ನೇತೃತ್ವದಲ್ಲಿ ಇದು ನಡೆಯಲಿದೆ. 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!