ಉಡುಪಿ: ಬಾಲಕಿಯ ಅತ್ಯಾಚಾರ ಪ್ರಕರಣ - ಶಂಶುದ್ದೀನ್'ಗೆ 20 ವರ್ಷ ಜೈಲುಶಿಕ್ಷೆ.!
ಅತ್ಯಾಚಾರ, ವಿಡಿಯೋ ಚಿತ್ರೀಕರಣ, ಬೆದರಿಕೆ
ಆರೋಪಿಗೆ ಕಠಿಣ ಜೈಲುಶಿಕ್ಷೆ

ಉಡುಪಿ: ವಿಡಿಯೋ ಚಿತ್ರೀಕರಣ ಮಾಡಿ ಬೆದರಿಸಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು ಇಂದು ಆದೇಶ ನೀಡಿದೆ. 

ಕಾಪು ಮಜೂರು ನಿವಾಸಿ ಶಂಶುದ್ದೀನ್(24) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಆರೋಪಿ ಬಾಲಕಿಯನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಬಿಡುತ್ತಿದ್ದು, ಆತ ತನ್ನ ಮೊಬೈಲ್‌ನಲ್ಲಿ ಒತ್ತಾಯ ಪೂರ್ವಕವಾಗಿ ಬಾಲಕಿಯ ಫೋಟೋ ತೆಗೆದಿದ್ದನು. ಬಳಿಕ ಈ ಫೋಟೋವನ್ನು ಬೇರೆಯವರಿಗೆ ಕಳುಹಿಸಿ ವೈರಲ್ ಮಾಡುವುದಾಗಿ ಹೆದರಿಸಿದ್ದು, ನನ್ನ ಜೊತೆ ಬಂದಲ್ಲಿ ಫೋಟೋ ಡಿಲೀಟ್ ಮಾಡುವುದಾಗಿ ನಂಬಿಸಿದ್ದನು.

ಅದರಂತೆ ನೊಂದ ಬಾಲಕಿಯನ್ನು ಕಾಪುವಿನ ಲಾಡ್ಜ್‌ಗೆ ಕರೆದುಕೊಂಡು ಹೋಗಿ ತನ್ನ ಹೆಂಡತಿ ಎಂದು ಸುಳ್ಳು ಮಾಹಿತಿ ನೀಡಿ ರೂಮ್ ಪಡೆದು ಅತ್ಯಾಚಾರ ಎಸಗಿದ್ದನು. ಅದೇ ಸಮಯ ಆರೋಪಿ ನೊಂದ ಬಾಲಕಿಯ ಅರೆ ನಗ್ನ ಚಿತ್ರಗಳನ್ನು ತೆಗೆದು ವಿಡಿಯೋ ಮಾಡಿದ್ದನು. ನಂತರ ಡಿಲೀಟ್ ಮಾಡ ಬೇಕಾದರೆ ಹಣ ನೀಡಬೇಕೆಂದು ಬೆದರಿಕೆ ಹಾಕಿ ಆಕೆಯಿಂದ ಹಣ ಪಡೆದುಕೊಂಡಿದ್ದನು. ಅದೇ ರೀತಿ ಬೆದರಿಸಿ ಕಾಪುವಿನ ರೆಸಾರ್ಟ್‌ಗೆ ಕರೆದು ಕೊಂಡು ಹೋಗಿ ಬಾಲಕಿಗೆ ದೌರ್ಜನ್ಯ ಎಸಗಿದ್ದನು ಎಂದು ದೂರಲಾಗಿತ್ತು.

ಆರೋಪಿ ಮತ್ತೆ ಕರೆದಾಗ ಬಾಲಕಿ ಹೋಗಲು ನಿರಾಕರಿಸಿದಕ್ಕೆ ಆಕೆಯ ಅರೆನಗ್ನ ಚಿತ್ರಗಳನ್ನು ಆಕೆಯ ತಾಯಿಯ ಮೊಬೈಲ್‌ಗೆ ಕಳುಹಿಸಿ ತಾನು ಕೇಳಿದಷ್ಟು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದನು. ಈ ಬಗ್ಗೆ ನೊಂದ ಬಾಲಕಿಯನ್ನು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ತಾಯಿ ನೀಡಿದ ದೂರಿನಂತೆ ಆಗಿನ ಕಾಪು ಪೊಲೀಸ್ ಠಾಣಾ ಎಸ್ಸೈ ರಾಘವೇಂದ್ರ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದ ಆಗಿನ ವೃತ್ತ ನಿರೀಕ್ಷಕ ಪ್ರಕಾಶ್ ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಒಟ್ಟು 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ್ಯ ಮತ್ತು ಮೊಬೈಲ್‌ಗಳಲ್ಲಿದ್ದ ಭಾವಚಿತ್ರದ ಬಗ್ಗೆ ಅಭಿಯೋಜನೆ ಸಲ್ಲಿಸಿರುವ ತಜ್ಞರ ಅಭಿಪ್ರಾಯಗಳನ್ನು ಪರಿಗಣಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಅತ್ಯಾಚಾರ ಎಗಿರುವ ಕಾರಣ 10 ವರ್ಷ ಕಠಿಣ ಸಜೆ, 10 ಸಾವಿರ ರೂ. ದಂಡ, ಬಾಲಕಿಯ ಅತ್ಯಾಚಾರಕ್ಕೆ 20ವರ್ಷಗಳ ಕಠಿಣ ಸಜೆ 20ಸಾವಿರ ರೂ. ದಂಡ, ಬೆದರಿಕೆಯೊಡ್ಡಿದಕ್ಕೆ ಒಂದು ವರ್ಷ ಸಜೆ ಒಂದು ಸಾವಿರ ರೂ. ದಂಡ, ಲೈಂಗಿಕ ಹಲ್ಲೆಗಾಗಿ ಒಂದು ವರ್ಷ ಸಜೆ ಮತ್ತು ಒಂದು ಸಾವಿರ ರೂ. ದಂಡ, ಅರೆನಗ್ನ ವಿಡಿಯೋ ಚಿತ್ರೀಕರಣ ಮಾಡಿರುವುದಕ್ಕೆ 5ವರ್ಷ ಸಜೆ, 5000ರೂ. ದಂಡ, ವಿಡಿಯೋವನ್ನು ಮೊಬೈಲ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದಕ್ಕೆ 5000ರೂ. ದಂಡ, ಐಟಿ ಕಾಯಿದೆಯಡಿ 2ವರ್ಷ ಸಜೆ 2000ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿದರು. ಒಟ್ಟು 62 ಸಾವಿರ ರೂ. ದಂಡದಲ್ಲಿ 50ಸಾವಿರ ರೂ. ಬಾಲಕಿಗೆ, ಉಳಿದ 12ಸಾವಿರ ರೂ. ಸರಕಾರಕ್ಕೆ ಪಾವತಿಸುವಂತೆ ಮತ್ತು ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ಸರಕಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದಾರೆ.


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!