ಮಂಗಳೂರು: ಹಣದಾಸೆಗೆ ವ್ಯಾಪಾರಿಯ ಕೊಲೆ; ಆರೋಪಿಗೆ ಸಿಕ್ಕಿದ್ದು ಕೇವಲ 30 ರೂ.!
ಹಣದಾಸೆಗೆ ವ್ಯಾಪಾರಿಯ ಕೊಲೆ

ಮಂಗಳೂರು: ಹಣದಾಸೆಗೆ ವ್ಯಾಪಾರಿಯೋರ್ವರ ಕೊಲೆಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಣತೆ ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ ತಮಿಳುನಾಡಿನ ಸೇಲಂ ನಿವಾಸಿ ಮಾಯವೇಳ್ ಪೆರಿಯಸಾಮಿ (52) ಎಂಬವರನ್ನು ಹಣದಾಸೆಗೆ ಕೊಲೆ ಮಾಡಲಾಗಿದೆ. ಆರೋಪಿಯನ್ನು ಹೂವಿನ ಹಡಗಲಿ ನಿವಾಸಿ ರವಿ ಯಾನೆ ವಕೀಲ್ ನಾಯ್ಕ್ (42) ಎನ್ನಲಾಗಿದ್ದು, ಬಂದರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. 

ಘಟನೆ ವಿವರ:: 

ಮಾಯಾವೇಳ್ ಪೆರಿಯಸಾಮಿ ಮತ್ತವರ ಪತ್ನಿ ಅ.14ರಂದು ನಗರಕ್ಕೆ ಆಗಮಿಸಿ ಕುದ್ರೋಳಿಯ ಅಳಕೆ ಮಾರ್ಕೆಟ್ ಬಳಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡಿದ್ದರು. ಆರೋಪಿ ರವಿ ಯಾನೆ ವಕೀಲ್ ನಾಯ್ಕ್ ನಗರದ ಭವಂತಿ ಸ್ಟ್ರೀಟ್‌ನಲ್ಲಿ ಬೀದಿ ಬದಿ ತರಕಾರಿ ಮಾರಾಟ ಮಾಡುತ್ತಿದ್ದು, ದೀಪಾವಳಿಯ ವೇಳೆ ಹಣತೆಯನ್ನೂ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹಣತೆಯನ್ನು ಮಾಯಾವೇಳ್‌ಪೆರಿಯಸಾಮಿ ಬಳಿಯೇ ಖರೀದಿಸುತ್ತಿದ್ದ. ಮಾಯಾವೇಳ್ ಪೆರಿಯಸಾಮಿ ಹಣತೆಯ ರಖಂ ವ್ಯಾಪಾರಿಯಾದ ಕಾರಣ ಅವರ ಬಳಿ ಸಾಕಷ್ಟು ಹಣವಿರಬಹುದು ಎಂದು ಭಾವಿಸಿದ ಆರೋಪಿ ರವಿಯು ನಗರದ ವೈನ್‌ಶಾಪ್‌ನಲ್ಲಿ ಮದ್ಯ ಸೇವಿಸಿ 200 ದೀಪ ಬೇಕಾಗಿದೆ ಎಂದು ನಂಬಿಸಿಕೊಂಡು ಕೂಳೂರಿನ ಮೈದಾನಕ್ಕೆ ಕರೆದುಕೊಂಡು ಹೋಗಿದ್ದ. 

ಹಾಗೇ ಮಾಯಾವೇಳ್ ಪೆರಿಯಸಾಮಿಗೆ ಮದ್ಯಪಾನ ಕುಡಿಸಿ ನಂತರ ಆರೋಪಿ ರವಿಯು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎನ್ನಲಾಗಿದೆ. ಕೊಲೆಗೈದ ಬಳಿಕ ಆರೋಪಿಗೆ ಹಣತೆ ವ್ಯಾಪಾರಿ ಮಾಯಾವೇಳ್ ಪೆರಿಯಸಾಮಿಯ ಬಳಿ ಸಿಕ್ಕಿದ್ದು ಕೇವಲ 30 ರೂ. ಮಾತ್ರ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಮಾಯಾವೇಳ್ ಪೆರಿಯಸಾಮಿ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರವಿವಾರ ಕೂಳೂರಿನ ಮೈದಾನದ ಬಳಿ ಮಾನವನ ತಲೆಬುರುಡೆ, ಮೂಳೆ ಇತ್ಯಾದಿ ಸಿಕ್ಕಿತ್ತು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸಿದಾಗ ಇದು ಮಾಯಾವೇಳ್ ಪೆರಿಯಸಾಮಿ ಅವರದ್ದೆಂದು ತಿಳಿದು ಬಂತು. ಅಲ್ಲದೆ ಬಂದರು ಠಾಣೆಯ ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡವು ಆರೋಪಿ ರವಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕೊಲೆ ನಡೆಸಿರುವ ಬಗ್ಗೆ ಬಾಯ್ಬಿಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

 


You may also like

Comments

https://newsdaksha.online/assets/images/user-avatar-s.jpg

0 comment

Write the first comment for this!